ಕಾಂಗ್ರೆಸ್ ಬಂದಾಗ 'ಬರ ಗ್ಯಾರೆಂಟಿ': ಪ್ರಧಾನಿಯಿಂದ ಜನರಿಗೆ 'ಶಾಶ್ವತ ಗ್ಯಾರೆಂಟಿ': ಬಸವರಾಜ ಬೊಮ್ಮಾಯಿ
ಗದಗ, ಏಪ್ರಿಲ್ 08: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲೂ ಸಹ ಗ್ಯಾರೆಂಟಿಗಳದ್ದೆ ಕಾರುಬಾರು ಎನ್ನುವಂತಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ 25 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದೆ. ಇದರ ಬೆನ್ನಲ್ಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರು ದೇಶದ ಜನರಿಗೆ ನೀಡಿ ಗ್ಯಾರೆಂಟಿಗಳ ಲೆಕ್ಕ ಬಿಚ್ಚಿಟ್ಟಿದ್ದಾರೆ.
ಹೌದು, ಹಾವೇರಿ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಸಾಪುರ, ರಾಮಗಿರಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶದ ಗ್ರಾಮೀಣ ಮಹಿಳೆಯರಿಗೆ, ಬಡವರಿಗೆ ಮನೆ, ಕುಡಿಯಲು ನೀರು, ಶೌಚಾಲಯ, ಉಜ್ವಲ ಗ್ಯಾಸ್, ಅಕ್ಕಿ ಸೇರಿದಂತೆ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿಗಳು ಎಂದು ಅವರು ವಿವರಿಸಿದರು.
8 ಲಕ್ಷ ಮನೆ ಮನೆ ನಿರ್ಮಾಣ
ದೇಶ ಕಂಡ ದಿಟ್ಟ ಧಿಮಂತ ನಾಯಕ ನರೇಂದ್ರ ಮೋದಿಯವರು, ಅವರು ದೇಶದ ಎಲ್ಲರಿಗೂ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ 'ಪಿಎಂ ಆವಾಸ ಯೊಜನೆ' ಅಡಿಯಲ್ಲಿ 8 ಲಕ್ಷ ಮನೆ, 12 ಲಕ್ಷ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.

ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ನೀರು ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1300 ಕೊಟಿ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಜಾರಿಯಾಗುತ್ತಿದೆ. ಶಿರಹಟ್ಟಿ ಭಾಗದಲ್ಲಿಯೂ ಯೋಜನೆ ಅನಷ್ಠಾನವಾಗಲಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ಮಳೆಗಾಲಕ್ಕೆ ಯೋಜನೆ ಜಾರಿ ಆಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ರೈತ, ವಿದ್ಯಾರ್ಥಿ ಯೋಜನೆ ಸ್ಥಗಿತ
ನಾನು ಮುಖ್ಯಮಂತ್ರಿ ಆದ ತಕ್ಷಣ ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ಈಗ ಆ ಯೋಜನೆಯನ್ನು ನಿಲ್ಲಿಸಿದೆ. ರೈತರಿಗೆ ರಾಜ್ಯ ಸರ್ಕಾರದಿಂದ ವಾರ್ಷಿಕ 4000 ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ನಿಲ್ಲಿಸಿದೆ.
ಇನ್ನೂ ಕಳೆದ ವರ್ಷದ ಸೆಪ್ಟಂಬರ್ ನಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನಿಲ್ಲಿಸಿದ್ದಾರೆ. ಇದು ಜನ ವಿರೋಧಿ ಸರ್ಕಾರ ಎಂದು ಆಡಳಿ ಪಕ್ಷ ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಫಲಾನುಭವಿಗಳ ಮಾಸಿಕ ಹಣ ಹೆಚ್ಚಳ
ನಾನು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ತಾಯಂದರಿಗೆ, ವಿಧವೆಯರಿಗೆ 200 ಪಿಂಚಣಿ ಹೆಚ್ಚಳ ಮಾಡಿಧ್ದೇವೆ. ಅಂಗವಿಕಲರಿಗೆ 400 ರೂ. ಹೆಚ್ಚಳ ಮಾಡಲಾಯಿತು. ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಎಲ್ಲರಿಗೂ ತಲುಪಿಲ್ಲ ಜನರು ತಿರುಗಾಡಿ ಚಪ್ಪಲಿ ಸವೆಯುತ್ತಿವೆ ಎಂದು ಗ್ಯಾರೆಂಟಿ ಯೋಜನೆಗಳ ಕುರಿತು ಟೀಕಿಸಿದರು.
ಕಾಂಗ್ರೆಸ್ ಬಂದಾಗ 'ಬರ ಗ್ಯಾರೆಂಟಿ': ಬೊಮ್ಮಾಯಿ ವ್ಯಂಗ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಗ್ಯಾರೆಂಟಿ, ನಾವು ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರವಾಹ ಬಂದಿತ್ತು. ಇವರು ಬಂದರೆ ಬರ ಗ್ಯಾರೆಂಟಿ ಎಂಬಂತಾಗಿದೆ. ಇದು ರೈತರು ಮತ್ತು ಬಡವರ ವಿರೋಧಿ ಸರ್ಕಾರವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನಮಗೆ ಅನ್ನ ನೀರು, ಅಡುಗೆ ಅನಿಲ (ಗ್ಯಾಸ್) ಕೊಡುವ ಕೆಲಸ ಮಾಡಿದ್ದಾರೆ. ಅವರಿಗೆ ಮತ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುವ ಕೆಲಸ ನಾವು ಮಾಡಬೇಕು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಶಿರಹಟ್ಟಿ ನನಗೆ ಹೊಸದಲ್ಲ. ನಾನು ಸಂಸದನಾಗಿ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಿಎಂ ಅವರು ಚುನಾವಣಾ ಪ್ರಚಾರದಲ್ಲಿ ಮಾಜಿ ಸಚಿವ ಸಿ.ಸಿ ಪಾಟೀಲ್, ಶಾಸಕ ಚಂದ್ರು ಲಮಾಣಿ ಮತ್ತಿತರರು ಸಾಥ್ ನೀಡಿದರು. ಮಾಜಿ ಸಿಎಂ ಪ್ರಚಾರದ ವೇಳೆ ಮಹಿಳೆಯರು, ಹೆಣ್ಣು ಮಕ್ಕಳು, ಹಿರಿಯ ನಾಗರಿಕರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.












Click it and Unblock the Notifications