ಕೇವಲ 2,300 ರೂ. ವಾಪಸ್ ಕೊಡಲಿಲ್ಲ ಎಂದು ವ್ಯಕ್ತಿಯನ್ನು ಬರ್ಬರವಾಗಿ ಕೊಂದ ಸ್ನೇಹಿತರು
ಹಾವೇರಿ, ಅಕ್ಟೋಬರ್, 21; ಹಾವೇರಿ ತಾಲೂಕು ನಾಗನೂರು ಬಳಿ ಕೇವಲ 2,300 ರೂಪಾಯಿ ವಾಪಸ್ ಕೊಡಲಿಲ್ಲವೆಂದು ಆರೋಪಿಗಳು 46 ವರ್ಷದ ಮಹಾದೇವಪ್ಪ ಎಂಬುವವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಮಹಾದೇವಪ್ಪ ಎಂಬುವವರು ಕೂಡ ಈ ಮೊದಲು ನಿಧಿ ಆಸೆ ತೋರಿಸಿ ಜನರ ಕೆಂಗಣಿಗೆ ಗುರಿಯಾಗಿದ್ದು, ಇದೀಗ ಶವವಾಗಿ ಪತ್ತೆ ಆಗಿದ್ದಾರೆ. ಇನ್ನು ಮಹಾದೇವಪ್ಪನನ್ನು ಕೊಂದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಅಕ್ಟೋಬರ್ 12ರಂದು ಬೆಳ್ಳಂಬೆಳಗ್ಗೆ ಹೈವೇ ಬಳಿ ಹೆಣವೊಂದು ಪತ್ತೆ ಆಗಿತ್ತು. ವ್ಯಕ್ತಿಯೊಬ್ಬನ ತಲೆ ಬುರುಡೆ ಒಡೆದು ಹೋಗಿದ್ದು, ರಸ್ತೆಯಲ್ಲಿ ರಕ್ತ ಹರಿದಿತ್ತು. ಹಾವೇರಿ ತಾಲೂಕು ನಾಗನೂರು ಬಳಿ ಎನ್‌ಹೆಚ್4 ಹೈವೇ ಬಳಿ ಬಿದ್ದಿದ್ದ ವ್ಯಕ್ತಿಯ ಶವವನ್ನು ನೋಡಿದ ಜನರು ನಿಬ್ಬೆರಗಾಗಿದ್ದರು. ಸುತ್ತಿಗೆಯಿಂದ ಹೊಡೆದ ರಭಸಕ್ಕೆ ವ್ಯಕ್ತಿಯ ತಲೆ ಛಿದ್ರ ಛಿದ್ರವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯ ಹಿನ್ನೆಲೆ ಪತ್ತೆ ಹಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಆಗ ಕೊಲೆಯಾದ ವ್ಯಕ್ತಿ ಮಹದೇವಪ್ಪ ಕುರುವತ್ತಿ ಎಂದು ಗೊತ್ತಾಗಿದೆ. 46 ವರ್ಷದ ಮಹದೇವಪ್ಪ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ. ಶವ ಮರಣೋತ್ತರ ಪರೀಕ್ಷೆಗೆ ಕಳಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.
ಪರೇಶ್ ಮೇಸ್ತಾ ಸಾವಿನ ಸತ್ಯ ಬಿಚ್ಚಿಟ್ಟ ಸಿಬಿಐ: ನ್ಯಾಯಾಲಯಕ್ಕೆ ವಿಸ್ತೃತ ವರದಿ ಸಲ್ಲಿಕೆ!
ಆರೋಪಿಗಳನ್ನು ಬಂಧಿಸಿದ ಪೊಲೀಸರು
ಪೊಲೀಸರು ಇದೀಗ ಮಹದೇವಪ್ಪನ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ತನಿಖೆ ವೇಳೆ ಸೋಮಣ್ಣ ಹಾಗೂ ಚಂದ್ರು ಎಂಬುವವರೇ ಮಹದೇವಪ್ಪನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಯಾದ ಒಂದೇ ವಾರದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಶಿಗ್ಗಾವಿ ತಾಲೂಕು ಬಂಕಾಪುರದ ಸೋಮಣ್ಣ ಹಾಗೂ ರಾಣೆಬೆನ್ನೂರಿನ ಚಂದ್ರು ಸ್ನೇಹಿತರಾಗಿದ್ದರು. ಆರೋಪಿತರಿಗೆ ಹಲವು ದಿನಗಳ ಹಿಂದಷ್ಟೇ ಮಹದೇವಪ್ಪನ ಪರಿಚಯ ಆಗಿದೆ. ಕುಡಿತದ ಚಟಕ್ಕೆ ಬಿದ್ದಿದ್ದ ಮಹದೇವಪ್ಪ ಹೆಂಡತಿ, ಮಕ್ಕಳ ಜೊತೆಗೂ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡಿದ್ದ. ಮಹದೇವಪ್ಪ ಕೌಂಟುಂಬಿಕ ಕಲಹದಿಂದಾಗಿ ಮನೆ ಬಿಟ್ಟು ಓಡಾಡುತ್ತಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ಸಂಪೂರ್ಣ ಹಿನ್ನೆಲೆ
ಸೋಮಣ್ಣ ಹಾಗೂ ಚಂದ್ರುಗೆ ನಿಧಿ ತೋರಿಸುತ್ತೇನೆ. ಬಂಗಾರ, ವಜ್ರ ವೈಡೂರ್ಯವಿರುವ ನಿಧಿ ನಿಮ್ಮದಾಗುತ್ತದೆ. ಬನ್ನಿ ನನ್ನ ಜೊತೆ ಎಂದು ಎಂದು ಮಹದೇವಪ್ಪ ಕರೆದುಕೊಂಡು ಓಡಾಡಿದ್ದಾನೆ. ಆರೋಪಿ ಸೋಮಣ್ಣ ಖರ್ಚಿಗೆ ಅಂತಾ ಮಹದೇವಪ್ಪನಿಗೆ 2,300 ರೂಪಾಯಿ ಕೂಡ ಕೊಟ್ಟಿದ್ದನಂತೆ. ನಂತರ ಮಹದೇವಪ್ಪನನ್ನು ನಿಧಿ ಎಲ್ಲಿ ಸಿಗಲೇ ಇಲ್ಲ ಎಂದು ಸೋಮಣ್ಣ ಹಾಗೂ ಚಂದ್ರು ಕೇಳಿದ್ದಾರೆ. ಆಗ ಮಹದೇವಪ್ಪ ಅವಾಚ್ಯ ಪದಗಳಿಂದ ಇಬ್ಬರಿಗೆ ಬೈದಿದ್ದನಂತೆ. ತಕ್ಷಣ ಕೊಟ್ಟಿರುವ 2,300 ರೂಪಾಯಿ ಹಣವನ್ನು ವಾಪಾಸ್ ಕೊಡು ಎಂದು ಇಬ್ಬರು ಮಹಾದೇವಪ್ಪನನ್ನು ಕೇಳಿದ್ದಾರೆ. ಆಗ ಮಹಾದೇವಪ್ಪ ಯಾವ ಹಣ? ಯಾವ ನಿಧಿ? ಎಂದು ಸಿಟ್ಟಿನಿಂದಲೇ ನಿಂದಿಸಿದ್ದಾನೆ. ಇದಕ್ಕೆ ಆಕ್ರೋಶಗೊಂಡ ಆರೋಪಿಗಳು ಮಹಾದೇವಪ್ಪನಿಗೆ ಚೆನ್ನಾಗಿ ಕುಡಿಸಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಹಲವರಿಗೆ ನಿಧಿ ಆಸೆ ತೋರಿಸಿದ್ದ ಮಹಾದೇವಪ್ಪ
ನಿಧಿಯನ್ನು ಹುಡುಕಲು ಹೊರಟವರೇ ಜಗಳವಾಡಿ ಕೊನೆಗೆ ಸುತ್ತಿಗೆಯಿಂದ ಮಹಾದೇವಪ್ಪನ ತಲೆ ಒಡೆದು ಹತ್ಯೆ ಮಾಡಿ ಹೋಗಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಪ್ರಕಾಶ್ ಕಾಟೆ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕೊಲೆಯಾದ ಮಹಾದೇವಪ್ಪನಿಗೆ 10 ಹೆಕ್ಟೇರ್ ಜಮೀನು ಇದ್ದು, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಚೆನ್ನಾಗಿ ಉಳುಮೆ ಮಾಡಿಕೊಂಡು ಹೆಂಡತಿ, ಮಕ್ಕಳ ಜೊತೆಗೆ ಸುಖವಾಗಿರೋದು ಬಿಟ್ಟು ನಿಧಿ ತೋರಿಸುವ ಆಮಿಷ ತೋರಿಸಿ ಹೆಣವಾಗಿದ್ದಾನೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಸದಾ ಸುತ್ತಿಗೆ ಹಿಡಿದು ಓಡಾಡುತ್ತಿದ್ದ ಮಹಾದೇವಪ್ಪ ಹಲವರಿಗೆ ನಿಧಿ ಆಸೆ ತೋರಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಹೋಗಿದ್ದ ಸೋಮಣ್ಣ ಮತ್ತು ಚಂದ್ರು ಮಹಾದೇವಪ್ಪನ ಜೀವ ತೆಗೆದಿದ್ದಾರೆ ಎಂದು ಎಂದು ಆರೋಪಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.