ಲಿಂಗದಹಳ್ಳಿ: ಮಾನಸ ಸರೋವರದಿಂದ 1 ಕೋಟಿ ರೂ. ಮೌಲ್ಯದ ಸ್ಪಟಿಕಲಿಂಗ ಖರೀದಿ
ಹಾವೇರಿ, ಡಿಸೆಂಬರ್, 01: ಹಾವೇರಿ ತಾಲೂಕಿನ ಲಿಂಗದಹಳ್ಳಿಯ ಶ್ರೀ ರೇಣುಕಾಚಾರ್ಯರ ಮಂದಿರಲ್ಲಿದ್ದ ಐಸಿಹಾಸಿಕ ಸ್ಪಟಿಕಲಿಂಗ 6 ತಿಂಗಳ ಹಿಂದೆ ಕಳುವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮಾನಸ ಸರೋವರದಿಂದ ಹೊಸ ಸ್ಪಟಿಕಲಿಂಗವನ್ನು ತರಲಾಗಿದೆ.
ಚೀನಾ ವ್ಯಾಪ್ತಿಯಲ್ಲಿರುವ ಕೈಲಾಸ ಮಾನಸ ಸರೋವರದಿಂದ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೊಸ ಸ್ಪಟಿಕಲಿಂಗವನ್ನು ಖರೀದಿ ಮಾಡಲಾಗಿದೆ. ಈಗಿನ ಹೊಸ ಸ್ಪಟಿಕಲಿಂಗ ಒಂದೂವರೆ ಅಡಿ ಎತ್ತರ, 10 ಇಂಚು ಅಗಲ ಇದ್ದು, ಮಠದ ಶ್ರೀ ರೇಣುಕಾಚಾರ್ಯ ಮೂರ್ತಿ ಎದುರು ಸ್ಪಟಿಕಲಿಂಗವನ್ನು ಇಟ್ಟು ಪೂಜಿಸಲಾಗುತ್ತಿದೆ. ಅಲ್ಲದೆ, ಮೊದಲಿಂಗಿಂತಲೂ ಈ ಸ್ಪಟಿಕಲಿಂಗ ಹೆಚ್ಚು ಆಕರ್ಷಕವಾಗಿದೆ. ಅಲ್ಲದೆ ಜನವರಿ 23ರಂದು ಸ್ಪಟಿಕಲಿಂಗ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಸ್ಪಟಿಕಲಿಂಗದ ಜೊತೆ ಪಚ್ಚೆ ಲಿಂಗಗಳ ಖರೀದಿ
ಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ 1 ಕೋಟಿ ರೂಪಾಯಿಗಿಂತ ಅಧಿಕ ಹಣ ನೀಡಿ ಸ್ಪಟಿಕಲಿಂಗದ ಜೊತೆ ನಾಲ್ಕು ಪಚ್ಚೆ ಲಿಂಗಗಳನ್ನು ಖರೀದಿ ಮಾಡಿದ್ದಾರೆ. ಭಕ್ತರು ನೀಡಿದ ಹಣದ ಜೊತೆಗೆ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ ಮೇಲೆ, ಬ್ಯಾಂಕ್ ಹಾಗೂ ಕೆಇಬಿ ಸೊಸೈಟಿಯಲ್ಲಿ ಸಾಲ ಮಾಡಿ ಲಿಂಗವನ್ನು ಖರೀದಿ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ರಾಜಸ್ಥಾನದ ದಾಮೋದರಜಿ ಎಂಬುವವರ ಮೂಲಕ ಕೈಲಾಸ ಮಾನಸ ಸರೋವರದಲ್ಲಿನ ಪರಿಚಯಸ್ಥರಿಂದ ಲಿಂಗವನ್ನು ತರಿಸಿಕೊಳ್ಳಲಾಗಿದೆ. ಹಾಗೂ ಮಠದ ಸುತ್ತಲೂ ಹೊಸದಾಗಿ ಸಿಸಿ ಕ್ಯಾಮೆರಾ ಅಳವಡಿಸಿ ದಿನವಿಡೀ ಕಾವಲು ಕಾಯಲು ವವಸ್ಥೆ ಮಾಡಲಾಗಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ
ಇನ್ನು ಹಾವೇರಿಯಲ್ಲಿ 2023ರ ಜನವರಿ 6ರಿಂದ ಮೂರು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಅದರ ಪೂರ್ವಭಾವಿಯಾಗಿ 'ಕನ್ನಡ ಜ್ಯೋತಿ' ಹೊತ್ತ 'ಕನ್ನಡ ರಥ'ದ ಜಾಥಾಗೆ ಗುರುವಾರ (ಡಿಸೆಂಬರ್ 1) ಉತ್ತರ ಕನ್ನಡದ ಸಿದ್ಧಾಪುರದಲ್ಲಿ ಚಾಲನೆ ನೀಡಲಾಗಿದೆ. ಉತ್ತರ ಕನ್ನಡದ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ನಡೆದಿದೆ. ಕನ್ನಡ ಜ್ಯೋತಿ ರಥ ಅಲ್ಲಿಂದ ಹೊರಟಿದ್ದು, ಇದು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಮಹೇಶ ಜೋಶಿ ಹೇಳಿದ್ದರು.

ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಕನ್ನಡ ಜ್ಯೋತಿ'ಹೊತ್ತ 'ಕನ್ನಡ ರಥ'ದ ಜಾಥಾ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ಮುಂದಿನ ಎಲ್ಲ ಸಮ್ಮೇಳನಗಳಲ್ಲಿ ನಡೆಸಲು ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಮೂಲಕ ಹಾವೇರಿಯ ಸಮ್ಮೇಳನ ವಿಜೃಂಭಣೆಯಿಂದ ಮತ್ತು ಮಾದರಿಯಾಗುವಂತೆ ನಡೆಸಲಾಗುವುದು ಎಂದಿದ್ದರು. ಪರಿಷತ್ತಿನ 'ಕನ್ನಡ ರಥ'ವು ಆಯಾ ಜಿಲ್ಲೆಗಳಲ್ಲಿ ಸಂಚರಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಮಠಗಳು, ರೋಟರಿ ಕ್ಲಬ್, ಸ್ತ್ರೀ ಶಕ್ತಿ ಸಂಘಗಳು, ಇತರ ಎಲ್ಲ ಕನ್ನಡ ಸಂಘ-ಸಂಸ್ಥೆಗಳು ಜೊತೆಯಾಗಿ ಸ್ವಾಗತಿಸಬೇಕು ಮತ್ತು ಬಿಳ್ಕೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಜಾಥಾ ಯಶಸ್ವಿಗೆ ಕನ್ನಡಿಗರೆಲ್ಲರೂ ಸಹಕರಿಸುವಂತೆ ಮಹೇಶ ಜೋಶಿ ಕೋರಿದ್ದರು.












Click it and Unblock the Notifications