ದರ್ಶನ್ ಸಿನಿಮಾ ಕೇಳಿದ್ದಕ್ಕೆ ಹಾವೇರಿಯ ಥಿಯೇಟರ್ ಮಾಲೀಕನಿಗೆ 'ಡಿಚ್ಚಿ': ರಟ್ಟಿಹಳ್ಳಿ ಅಭಿಮಾನಿಗಳಿಗೂ 'ಥಳಿತ'
ಹಾವೇರಿ, ಜೂನ್ 16: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಜೈಲಲ್ಲಿರುವ ನಟ ದರ್ಶನ್ ತನ್ನ ಜೀವನದಲ್ಲಿ ಮಾಡಿರುವ ಸಾಲು ಸಾಲು ತಪ್ಪುಗಳು, ಮೆರೆದ ದರ್ಪ, ಜನಪ್ರಿಯತೆ ಮತ್ತು ಸ್ಟಾರ್‌ಗಿರಿಯ ದುರ್ಬಳಕೆಯಿಂದಾಗಿ ಕೆಲವು ಸಂಗತಿಗಳು ಇದೀಗ ಒಂದೊಂದಾಗಿಯೇ ಹೊರ ಬರುತ್ತಿವೆ. ಹಾವೇರಿ ಜಿಲ್ಲೆಯ ಚಿತ್ರಮಂದಿರ ಮಾಲೀಕನಿಗೆ ಡಿಚ್ಚಿ ಹೊಡೆದಿರುವುದು, ಬೌನ್ಸ್‌ರ್ಸ್‌ಗಳು ಅಭಿಮಾನಿಗಳಿಗೆ ಥಳಿಸಿದ ಘಟನೆಗಳೆಲ್ಲವು ಇದೀಗ ಬಹಿರಂಗಗೊಂಡಿವೆ.
ಸುಮಾರು 12 ವರ್ಷಗಳ ಹಿಂದೆ 2012ರ ನವೆಂಬರ್ 01ರಂದು ನಟ ದರ್ಶನ್ ನಟನೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾವನ್ನು ತನ್ನ ಥಿಯೇಟರ್‌ನಲ್ಲಿ ಪ್ರದರ್ಶಿಸಲು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಚಿತ್ರಮಂದಿರ ಮಾಲೀಕ ನಾಗನಗೌಡ ದರ್ಶನ್ ಮನೆ ಬಾಗಿಲಿಗೆ ಕೆಲವು ಅಲೆದಿದ್ದರು.

ಈ ಸಂಬಂಧ ಬೆಂಗಳೂರಿನ ಗಾಂಧಿನಗರದಲ್ಲಿ ಎರಡು ವಾರಗಳ ಕಾಲ ಉಳಿದುಕೊಂಡಿದ್ದಾರೆ. ಈ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ರೀಲ್ ಅನ್ನು ತನ್ನ ಥಿಯೇಟರ್ ಅನ್ನು ಅಡವಿಟ್ಟು ತೆಗೆದುಕೊಂಡು ಹೋಗಿ ಪ್ರದರ್ಶಿಸಿದ್ದರು ಎಂದು ಸ್ವತಃ ಅವರೇ ಮಾಧ್ಯಮದವರ ಜೊತೆ ದರ್ಶನ್ ಕುರಿತಾದ ಹಳೆಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಹಲವು ಭಾರಿ ಮನವಿ ಬಳಿಕ ಥಿಯೇಟರ್ ಮಾಲೀಕರಿಗೆ 'ಡಿಚ್ಚಿ', ಹಲ್ಲೆ
ನಮ್ಮ ಥಿಯೇಟರ್‌ನಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಹಾಕಿ ಜನರಿಗೆ ತೋರಿಸಬೇಕೆಂದು ನಾನು ಬೆಂಗಳೂರಿನಲ್ಲಿ ಓಡಾಡಿದ್ದೆ. ನಿನ್ನ ಥಿಯೇಟರ್ ಸಿ.ದರ್ಜೆಯದ್ದಾಗಿದೆ. ಹೀಗಾಗಿ 50 ದಿನ ಸಿನಿಮಾ ಪೂರೈಸಿದ ಮೇಲೆ ಕೊಡುತ್ತೇವೆ ಎಂದಿದ್ದರು. ಆಗ ಮತ್ತೆ ಮತ್ತೆ ಸಿನಿಮಾ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ದರ್ಶನ್ ಮನೆಗಳು ಕೆಲವು ಭಾರಿ ಓಡಾಡಿದ್ದೆ.
ಈ ವೇಳೆ ಸಿನಿಮಾದ ನಿರ್ಮಾಪಕರು ಬಂದು ನಿಮಗೆ ಸಿನಿಮಾ ಕೊಡುವುದಿಲ್ಲ ಎಂದು ಹೇಳಿ ಬಿಟ್ಟರು. ನಾನು ಸಿನಿಮಾವನ್ನು ಜನರಿಗೆ ತೋರಿಸಬೇಕು. ಏಕೆ ಸಿನಿಮಾ ಕೊಡುವುದಿಲ್ಲ ಎಂದು ಜೋರಾಗಿ ಕೇಳಿದ್ದಕ್ಕೆ ದರ್ಶನ್ ತಮ್ಮ ದಿನಕರ್ ತೂಗುದೀಪ್ ನನ್ನ ಮೂಗಿಗೆ ಹೊಡೆದು (ಡಿಚ್ಚಿ) ಹಲ್ಲೆ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಸಿನಿಮಾ ರೀಲ್ ಕೊಡಲು ಥಿಯೇಟರ್ ಅಡವಿಟ್ಟಿದ್ದ ಮಾಲೀಕ
ನಂತರ ಮತ್ತಷ್ಟು ಬಾರಿ ಮನವಿ ಮಾಡಿದ್ದಕ್ಕೆ ಅವರು, ನಿನಗೆ ಸಿನಿಮಾ ಕೊಡಬೇಕೆಂದರೆ 30 ಲಕ್ಷ ರೂ.ಕೊಡಬೇಕು. ಅಡ್ವಾನ್ಸ್ ಆಗಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟರು. ನನ್ನ ಬಳಿ ಅಷ್ಟು ಹಣ ಇಲ್ಲವೆಂದಾಗ ಹೊರಗೆ ಕಳುಹಿಸಿ ಬಿಟ್ಟರು. ನಂತರ ನಿನ್ನ ಥಿಯೇಟರ್ ಎಷ್ಟು ಬೆಲೆ ಬಾಳುತ್ತದೆ ಎಂದು ಕೇಳಿದ್ದಕ್ಕೆ ನಾನು ಒಂದೆರಡು ಕೋಟಿ ಎಂದಿದ್ದೆ. ಹಾಗಾದರೆ ಅದನ್ನೆ ಅಡವಿಟ್ಟು ಸಿನಿಮಾ ರೀಲ್ ತೆಗೆದುಕೊಂಡು ಹೋಗಲು ಮುಲಾಜಿಲ್ಲದೇ ಹೇಳಿದ್ದರು.
ಒಂದು ವಾರದ ನಂತರ ಸಿನಿಮಾ ರೀಲ್ ಪಡೆದ ಮಾಲೀಕ
ಎಲ್ಲದಕ್ಕೂ ಒಪ್ಪಿ ಕಾಗದಪತ್ರ ಅವರ ಕೈಗೆ ಇಟ್ಟೆ. ಸಿನಿಮಾ ಪ್ರಿಂಟ್ ಚೆನ್ನೈನಿಂದ ಬರಬೇಕು. ಅದಕ್ಕಾಗಿ ಅವರ ಬೇಡಿಕೆಯಂತೆ ಸಾಲ ಸೂಲ ಮಾಡಿ ಮತ್ತೆ ಎರಡು ಲಕ್ಷ ರೂಪಾಯಿ ಹೊಂದಿಸಿ ನೀಡಿದ್ದೇನೆ. ನಂತರ ಸಿನಿಮಾ ರಿಲೀಸ್ ಆಗಿ ಒಂದು ವಾರದ ಬಳಿಕ ರೀಲ್ ಪಡೆದು, ಅದಕ್ಕೆ ಒಂಬತ್ತು ಲಕ್ಷಕ್ಕೂ ಹೆಚ್ಚು ಕೊಟ್ಟು, ಕಾಗದ ಪತ್ರ ಮರಳಿ ಪಡೆದಿದ್ದೆ ಎಂದರು.
ತಡವಾಗಿದ್ದ ಬಂದಿದ್ದ ದರ್ಶನ್: ಅಭಿಮಾನಿಗಳ ಮೇಲೆ ಹಲ್ಲೆ
ಇದೆಲ್ಲ ಆಗಿ ರಟ್ಟಿಹಳ್ಳಿಯಲ್ಲಿನ ಚಿತ್ರಮಂದಿರದಲ್ಲಿ ದರ್ಶನ್ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' 50 ದಿನ ಪ್ರದರ್ಶನ ಕಂಡಿತು. ಆಗ ದರ್ಶನ್ ರಟ್ಟಿಹಳ್ಳಿಗೆ ಬರುವುದಾಗಿ ಮಾಹಿತಿ ಗೊತ್ತಾಯಿತು. ಮಧ್ಯಾಹ್ನ ಬರುವುದಾಗಿ ಹೇಳಿದ್ದ ಅವರು, ಮಧ್ಯರಾತ್ರಿ 12 ಗಂಟೆಗೆ ಬಂದು ವಾಪಾಸಾಗಿದ್ದರು.
ಈ ವೇಳೆ ಅವರನ್ನು ದಾರಿಯಲ್ಲಿ ನಿಲ್ಲಿಸಿದ್ದ ಅಭಿಮಾನಿಗಳು ಫೋಟೋಗಾಗಿ ಕೇಳಿದ್ದಾರೆ. ಆಗ ದರ್ಶನ್ ತನ್ನ ಬೌನ್ಸರ್ಸ್‌ಗಳನ್ನು ಬಿಟ್ಟು ಅಭಿಮಾನಿಗಳಿಗೆ ಹೊಡೆಸಿದ್ದರು. ಮೈಮೇಲೆ ಬಾಸುಂಡೆ ಏಳುವಂತೆ ಒದೆ ಕೊಟ್ಟಿದ್ದರು. ಬಳಿಕ ಆ ಅಭಿಮಾನಿಗಳೆಲ್ಲ ರಟ್ಟಿಹಳ್ಳಿಯಲ್ಲಿ ಹಾಕಿದ್ದ ಸಿನಿಮಾದ ಪೋಸ್ಟರ್ ಕಿತ್ತು ಆಕ್ರೋಶ ಹೊರ ಹಾಕಿದ್ದರು.
ನಿಜ ಜೀವನದ ಉದ್ದಕ್ಕೂ 'ವಿಲನ್' ಆಗಿರುವ ದರ್ಶನ್
ಹೀಗೆ ದರ್ಶನ್ ತನ್ನ ಸಿನಿಮಾ, ಜೀವನದುದ್ದಕ್ಕೂ ಅನೇಕ ರದ್ದಾಂತ, ದರ್ಪ, ಅಹಂ ತೋರಿಸುತ್ತಲೇ ಬಂದಿದ್ದಾನೆ. ಸಾಮಾನ್ಯ ವ್ಯಕ್ತಿಗೆ ಇರುವಷ್ಟು ಮಾನವೀಯತೆ, ಮನುಷ್ಯತ್ವ ಇಲ್ಲದೇ ನಡೆದುಕೊಂಡಿದ್ದಾನೆ. ಮೈಸೂರಿನ ಹೋಟೆಲ್‌ನಲ್ಲಿ ವೇಟರ್ ಮೇಲೆ ಹಲ್ಲೆ ಮಾಡಿದರೆ, ಮತ್ತೊಂದು ರೆಸಾರ್ಟ್ ನಲ್ಲಿ ಮಹಿಳಾ ಸಿಬ್ಬಂದಿಗೆ ಸಿಗರೇಟ್ ಹಚ್ಚಿದ್ದ ಎನ್ನಲಾಗಿದೆ. ಇನ್ನೂ ಭರತ್ ಎಂಬ ಯುವನಿರ್ದೇಶಕನಿಗೆ ಜೀವ ಬೆದರಿಕೆ ಸಹ ಹಾಕಿದ್ದಾನೆ ಎಂಬ ಆಡಿಯೋ ಸಹ ವೈರಲ್ ಆಗಿದೆ. ಕೆಲವೆಡೆ ಈತನಿಂದ ತೊಂದರೆಗೆ ಒಳಗಾದವರು ದೂರು ನೀಡುತ್ತಿದ್ದಾರೆ.












Click it and Unblock the Notifications