Karnataka BJP Candidates: ಹಾವೇರಿ ಕ್ಷೇತ್ರದ ಹಾಲಿ ಶಾಸಕನಿಗೆ ಕೈತಪ್ಪಿದ ಬಿಜೆಪಿ ಟಿಕೆಟ್; ಹೊಸ ಅಭ್ಯರ್ಥಿ ಘೋಷಣೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಇದೀಗ ಆಡಳಿತರೂಢ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬುಧವಾರ, ಏಪ್ರಿಲ್ 12ರಂದು ಬಿಡುಗಡೆ ಮಾಡಿದೆ.
ಈ ಮೊದಲು 189 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರ (ಎಸ್‌ಸಿ ಮೀಸಲು)ಕ್ಕೆ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದೆ.

ಹಾವೇರಿ ಕ್ಷೇತ್ರದ ಹಾಲಿ ಶಾಸಕ ನೆಹರು ಓಲೇಕಾರ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ, ಬದಲಾಗಿ ಹೊಸ ಮುಖ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಇನ್ನು ಇದೇ ವೇಳೆ, ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಜ್ ಸಜ್ಜನ್ ಅವರಿಗೆ ಟಿಕೆಟ್ ನೀಡಿದೆ.
ದಿವಂಗತ ಸಿಎಂ ಉದಾಸಿ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಶಿವರಾಜ್ ಸಜ್ಜನ್ ಅವರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ವಿರುದ್ಧ ಸೋಲು ಕಂಡಿದ್ದರು. ಇದೀಗ ಮತ್ತೆ ಇವರಿಬ್ಬರು ಚುನಾವಣಾ ಕಣದಲ್ಲಿ ಮುಖಾಮುಖಿಯಾಗಲಿದ್ದಾರೆ.
ಸತತ ಎರಡನೇ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಅದರಲ್ಲೂ ನಿರೀಕ್ಷಿಸಿದಂತೆ ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ, ಹೊಸ ಅಭ್ಯರ್ಥಿಯನ್ನು ಘೋಷಿಸಿದೆ.
ಹಾವೇರಿ ವಿಧಾನಸಭೆ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ.
ನೆಹರು ಓಲೇಕಾರ್‌ಗೆ ಟಿಕೆಟ್ ಕೈತಪ್ಪಲು ಕಾರಣವೇನು?
ಕೆಲವು ತಿಂಗಳುಗಳ ಹಿಂದೆ ಹಾವೇರಿ ನಗರಸಭೆಯಲ್ಲಿ ಕಾಮಗಾರಿ ನಡೆಯದಿದ್ದರೂ ನಕಲಿ ಬಿಲ್ ಸೃಷ್ಟಿಸಿ 5 ಕೋಟಿ ರೂ.ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿದ ನಡೆಸಿದ ಶಾಸಕ ನೆಹರು ಓಲೇಕಾರ್ ಮತ್ತು ಅವರ ಇಬ್ಬರು ಪುತ್ರರ ಮೇಲೆ ಕೇಳಿಬಂದಿತ್ತು.
ನೆಹರು ಓಲೇಕಾರ್ ಅವರು ಹಾವೇರಿ ನಗರಸಭೆ ಕಾಮಗಾರಿಯ ಟೆಂಡರ್ ಅನ್ನು ತನ್ನ ಇಬ್ಬರು ಪುತ್ರರಿಗೆ ನೀಡಿರುವುದಾಗಿ ದಾಖಲೆ ತೋರಿಸಿದ್ದರು. ಈ ಸ್ವಜನ ಪಕ್ಷಪಾತದ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ ಬಳಿಕ ತನಿಖೆಯಲ್ಲಿ ಶಾಸಕ ನೆಹರು ಓಲೇಕಾರ್ ಮತ್ತು ಪುತ್ರರು ಭ್ರಷ್ಟಾಚಾರ ನಡೆಸಿರುವುದು ಸಾಬೀತಾಗಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕ ನೆಹರು ಓಲೇಕಾರ್ ದೋಷಿ ಎಂದು ತೀರ್ಮಾನಿಸಿ, ಅವರಿಗೆ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (91ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ) 2023ರ ಫೆಬ್ರವರಿ 13ರಂದು ಹೊರಡಿಸಿತ್ತು. ನಂತರ ಈ ಆದೇಶದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ವಿಚಾರವಾಗಿ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ಮಾತನಾಡುತ್ತಲೇ ಇರುತ್ತಾರೆ. ಹೀಗಾಗಿ ಸ್ವಪಕ್ಷದಲ್ಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದವರಿಗೆ ಮಣೆ ಹಾಕದಿರಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದಂತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ವಿಪಕ್ಷಗಳ ಬಾಯಿಗೆ ಆಹಾರವಾಗಬಾರದೆಂಬ ಉದ್ದೇಶದಿಂದ, ಬಿಜೆಪಿ ಹೈಕಮಾಂಡ್ ಭ್ರಷ್ಟಾಚಾರ ಆರೋಪ ಹೊತ್ತಿರುವ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೆ, ಹೊಸ ಮುಖಗಳಿಗೆ ಅವಕಾಶ ನೀಡಿದೆ.
ಹಾವೇರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು
ಬಸವರಾಜ ಬೊಮ್ಮಾಯಿ - ಶಿಗ್ಗಾವಿ- ಸವಣೂರು ಕ್ಷೇತ್ರ
ಬಿಸಿ ಪಾಟೀಲ್- ಹಿರೇಕೆರೂರು ಕ್ಷೇತ್ರ
ಅರುಣ್‌ಕುಮಾರ್ ಪೂಜಾರ್- ರಾಣೇಬೆನ್ನೂರ ಕ್ಷೇತ್ರ
ವಿರೂಪಾಕ್ಷಪ್ಪ ಬಳ್ಳಾರಿ- ಬ್ಯಾಡಗಿ ಕ್ಷೇತ್ರ
ಶಿವರಾಜ್ ಸಜ್ಜನರ್- ಹಾನಗಲ್ ಕ್ಷೇತ್ರ
ಗವಿಸಿದ್ದಪ್ಪ ದ್ಯಾಮಣ್ಣನವರ್ - ಹಾವೇರಿ (ಎಸ್‌ಸಿ ಮೀಸಲು) ಕ್ಷೇತ್ರ
2023ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಮತದಾನ ನಡೆಯಲಿದ್ದರೆ, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications