ಅಮಿತ್ ಶಾ ಜೊತೆಗೂಡಿ ಬಸವರಾಜ್ ಬೊಮ್ಮಾಯಿ ಭರ್ಜರಿ ರಣತಂತ್ರ: ನಟ ಪ್ರಕಾಶ್ ರಾಜ್ ವಿರುದ್ಧ ಕಿಡಿ
ಹಾವೇರಿ, ಮೇ 01: ಮಾಜಿ ಮುಖ್ಯಮಂತ್ರಿಗಳಾದ ನೀವು, ನಿಮ್ಮ ಶಕ್ತಿ ಸಂಸತ್‌ಗೆ ಬೇಕಿದೆ. ಕೇಂದ್ರ ಸರ್ಕಾರ, ಹಾವೇರಿ ಒಳಗೊಂಡಂತೆ ದೇಶದ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ ಎಂದು ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದರ ಬೆನ್ನಲ್ಲೆ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಬೊಮ್ಮಾಯಿ ಅವರ ಜೊತೆಗೂಡಿ ರಣತಂತ್ರ ಹೆಣೆದಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬುಧವಾರ ಅಮಿತ್ ಶಾ ಅವರು, ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ ದೊಡ್ಡ ನಾಯಕರಾಗಿದ್ದು ದೇಶಕ್ಕೆ ಅವರ ಸೇವೆ ಅವಶ್ಯಕತೆ ಇದೇ ಬೊಮ್ಮಾಯಿಯವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತದಾರರಲ್ಲಿ ಮನವಿ ಮಾಡಿದರು.
ದೇಶಕ್ಕೆ ಬೊಮ್ಮಾಯಿ ಸೇವೆ ಅಗತ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶವನ್ನು ಶಕ್ತಿಶಾಲಿಯನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಈ ಬಾರಿ ಕೇಂದ್ರದಲ್ಲಿ 400 ಸೀಟು ಗೆಲ್ಲುವ ಜೊತೆಗೆ ಬಸವರಾಜ ಬೊಮ್ಮಾಯಿ ಒಳ್ಳೆಯ ನಾಯಕರಿದ್ದಾರೆ. ದೇಶಕ್ಕೆ ಅವರ ಸೇವೆ ಅಗತ್ಯವಿದ್ದು, ಅವರನ್ನು ಹೆಚ್ಚಿನ ಮತಗಳಿಂದ ಆರಿಸಿ ಕಳುಹಿಸಿ ಎಂದರು.
ಇದಕ್ಕೂ ಮೊದಲು ರಾಣೆಬೆನ್ನೂರಿನ ಕುರುಬರಿಗೆ ಕ್ರಾಂಗ್ರೆಸ್‌ನಿಂದ ಎಂಜಿ ರಸ್ತೆ ಮಾರ್ಗವಾಗಿ ಅಶೋಕ್ ಸರ್ಕಲ್ ವರೆಗೂ ನಡೆದ ಬೃಹತ್ ರೋಡ್ ಶೋನಲ್ಲಿ ಅಮಿತ್ ಪಾಲ್ಗೊಂಡಿದ್ದರು.
ನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಚಿತ್ರನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ. ಅವರು ಏನೇ ಮಾತನಾಡಿದರೂ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಾರೆ. ಅವರ ಮಾತಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದರು.

ಆತಂಕವಾದಿಗಳಿಗೆ ಇಲ್ಲಿ ಅವಕಾಶ ಇಲ್ಲ
ಚಿತ್ರನಟ ಪ್ರಕಾಶ್ ರಾಜ್ ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆತಂಕವಾದಿಗಳಿಗೆ ನಾವು ಆತಂಕವಾದಿಗಳು ಎಂದು ಈಗಾಗಲೇ ಪ್ರಧಾನಿ ಮೋದಿ ಹೇಳಿದ್ದಾರೆ. ಭಯೋತ್ಪಾದಕರಿಗೆ ಆತಂಕವಾದಿಗಳಿಗೆ ಈ ನೆಲದ ಮೇಲೆ ಅವಕಾಶ ಇಲ್ಲ. ಭಯೋತ್ಪಾದಕ ಕೃತ್ಯ ಮಾಡಿದವರಿಗೆ ಭಯೋತ್ಪಾದಕ ಅನ್ನುತ್ತಾರೆ ಎಂದರು.
ಪ್ರಕಾಶ್ ರಾಜ್ ಒಳ್ಳೆಯ ನಟ ಅವರು ಈಗಾಗಲೇ ವಿವಾದಾತ್ಮಕ ಮಾತನಾಡಿದ್ದಾರೆ. ವಿವಾದಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಸ್ತುತ ಇರಬೇಕು ಅಂತ ತೀರ್ಮಾನ ಮಾಡಿದಂತಿದೆ ಎಂದು ಪ್ರಕಾಶ್ ರಾಜ್ ಗೆ ತಿರುಗೇಟು ನೀಡಿದರು.
ರಾಣೆಬೆನ್ನೂರು ರೋಡ್ ಶೋ ನಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಅರುಣ್ ಕುಮಾರ್ ಪೂಜಾರ್, ಮಾಜಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಣೆಬೆನ್ನೂರಿನಲ್ಲಿ ರೋಡ್ ಶೋ ಮುಗಿಸಿ ಅಮಿತ್ ಶಾ ಹುಬ್ಬಳ್ಳಿಗೆ ತೆರಳಿದರು.












Click it and Unblock the Notifications