ಹಾವೇರಿ : ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೊಂದಿದ್ದು ಸಂಬಂಧಿಕ!
ಹಾವೇರಿ, ಆಗಸ್ಟ್ 12 : ಹಾವೇರಿಯಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಸಂಬಂಧಿಯೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆ ಮಾಡಿದ್ದ.
ಹತ್ಯೆ ಆರೋಪಿಯನ್ನು ಮಂಜುನಾಥ ಗೌಡ ಎಂದು ಗುರುತಿಸಲಾಗಿದೆ. ಆಗಸ್ಟ್ 6ರಂದು ಜಿ.ಎನ್.ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಆಗಸ್ಟ್ 8ರಂದು ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಸ್ಟ್ 9ರಂದು ವರದಾ ನದಿ ಸೇತುವೆ ಕೆಳಗೆ ವಿದ್ಯಾರ್ಥಿನಿ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣದ ತನಿಖೆಗೆ ಹಾವೇರಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಜಿ.ಎ.ಜಗದೀಶ್ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಜುನಾಥ ಗೌಡ ಬಂಧಿಸಿ, ತನಿಖೆ ನಡೆಸಿದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ವಿವರ : ಮಂಜುನಾಥ ಗೌಡ ವಿದ್ಯಾರ್ಥಿನಿಯ ಸಂಬಂಧಿಕ. ಆಕೆಯನ್ನು ಅಪಹರಣ ಮಾಡಿ, ಹಾವೇರಿಯ ಬಸವೇಶ್ವರ ನಗರದ ಅಕ್ಕಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಪ್ರಯತ್ನ ನಡೆಸಿದ್ದ.
ಆಕೆ ಪ್ರತಿಭಟನೆ ನಡೆಸಿದಾಗ ವೇಲ್‌ನಿಂದ ಕುತ್ತಿಗೆಗೆ ಬಿಗಿದಿದ್ದಾನೆ. ಆಗ ವಿದ್ಯಾರ್ಥಿನಿ ಅರೆ ಪ್ರಜ್ಞಾವಸ್ಥೆ ತೆಲುಪಿದ್ದಾಳೆ. ಆಗ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಎಚ್ಚರಗೊಂಡಾಗ ಯಾರಿಗಾದರೂ ಹೇಳಬಹುದು ಎಂಬ ಭಯದಿಂದ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.
ನಂತರ ಎಪಿಎಂಸಿಯಿಂದ ಒಂದು ಗೋಣಿಚೀಲ ತಂದು, ಮನೆಯಯಲ್ಲಿದ್ದ ಬಿಳಿ ಪ್ಲಾಸ್ಟಿಕ್ ಚೀಲದ ಸಹಾಯದಿಂದ ಮೃತ ದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ, ವರದಾ ನದಿ ಸೇತುವೆ ಕೆಳಗೆ ಹಾಕಿ ಬೆಂಕಿ ಹಚ್ಚಿ ಸಾಕ್ಷಿ ನಾಶ ಮಾಡಲು ಪ್ರಯತ್ನ ನಡೆಸಿದ್ದ.
ವಿದ್ಯಾರ್ಥಿನಿ ಬ್ಯಾಗ್, ಐಡಿ ಕಾರ್ಡ್‌ಗಳನ್ನು ವರದಾ ನದಿಗೆ ಎಸೆದಿದ್ದ. ಕೊಲೆ ಮಾಡಲು ಬಳಸಿದ ದೊಣ್ಣೆ, ಮೃತಳ ಬಟ್ಟೆಗಳನ್ನು ಬೇರೆ ಕಡೆ ಬಿಸಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.












Click it and Unblock the Notifications