Tirupati Trip: ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಹಾವೇರಿ, ಮೇ 24: ಕರ್ನಾಟಕದಿಂದ ತಿರುಪತಿಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿ ಬೈಪಾಸ್ ಬಳಿ ನಡೆದಿದೆ.
ಸುರೇಶ್ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22) ಹಾಗೂ ಚೇತನಾ ಪ್ರಭುರಾಜ ಸಮಗಂಡಿ (7) ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಮೀಳಾ ಎನ್ನುವವರು (28) ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹಾವೇರಿ ಪಟ್ಟಣದ ಅಶ್ವಿನಿ ನಗರದ ನಿವಾಸಿಗಳಾದ ಹಾವೇರಿಯ ಸಮಗಂಡಿ ಮತ್ತು ಬಾರ್ಕಿ ಎಂಬ ಎರಡು ಕುಟುಂಬಗಳು ದೇವರ ದರ್ಶನಕ್ಕೆಂದು ತಿರುಪತಿಗೆ ತೆರಳುತ್ತಿದ್ದರು. ಈ ವೇಳೆ ರಾಣೇಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಫ್‌ಎಸ್‌ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವಂತೆ ಬೊಮ್ಮಾಯಿ ಆಗ್ರಹ
ಘಟನೆಯ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. 'ಹಾವೇರಿಯಿಂದ ತಿರುಪತಿ ದರ್ಶನಕ್ಕೆಂದು ಹೋಗುತ್ತಿದ್ದವರ ಕಾರು ರಾಣೇಬೆನ್ನೂರು ಬಳಿ ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ದೇವರು ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಗಾಯಗೊಂಡಿರುವ ಶೀಘ್ರವಾಗಿ ಗುಣಮುಖರಾಗಲಿಯೆಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಕೂಡಲೇ ಮೃತರ ಹಾಗೂ ಗಾಯಗೊಂಡಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಿಯೆಂದು ಆಗ್ರಹಿಸುತ್ತೇನೆ' ಎಂದಿದ್ದಾರೆ.












Click it and Unblock the Notifications