ಅನಧಿಕೃತ ಬಡಾವಣೆಗಳ ನಿವೇಶನ ಖರೀದಿಸಬೇಡಿ: ಸಾರ್ವಜನಿಕರಿಗೆ ಹಾವೇರಿ ಜಿಲ್ಲಾಧಿಕಾರಿ ಎಚ್ಚರಿಕೆ
ಹಾವೇರಿ, ಆಗಸ್ಟ್ 23: ನಾಗರಿಕರು ನಿವೇಶನಗಳನ್ನು ಖರೀದಿಸುವ ಪೂರ್ವದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸಗಳಿಗೆ ಅನುಮೋದನೆ ಪಡೆದು ಮುಕ್ತಾಯ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಖರೀದಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದ್ದಾರೆ.
ಹಾವೇರಿ ನಗರಸಭೆ ಸೇರಿದಂತೆ 15 ಹಳ್ಳಿಗಳನ್ನು ಒಳಗೊಂಡ ಪ್ರದೇಶಕ್ಕೆ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮತಿ ಇಲ್ಲದೇ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ.

ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ ಖಾಸಗಿ ಬಡಾವಣೆಗಳನ್ನು ರಚಿಸಿ ಅಕ್ರಮವಾಗಿ ನಿವೇಶನಗಳನ್ನು ರಚಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಂತಹ ಅಕ್ರಮ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿದಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಅವರು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಕೃಷಿ ಜಮೀನುಗಳಲ್ಲಿ ಅನಧಿಕೃತವಾಗಿ ಖಾಸಗಿ ಬಡಾವಣೆಗಳನ್ನು ರಚಿಸಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಹಾವೇರಿ ನಗರದ ನಾಗರಿಕರು ಇಂತಹ ನಿವೇಶನಗಳನ್ನು ಖರೀದಿಸಿ ಮೋಸ ಹೋಗಬಾರದೆಂದು ಎಚ್ಚರಿಸಲಾಗಿದೆ. ಒಂದು ವೇಳೆ ಖರೀದಿಸಿದ್ದಲ್ಲಿ ಅದಕ್ಕೆ ತಾವೇ ಹೊಣೆಗಾರರಾಗುತ್ತೀರಿ ಮತ್ತು ನಗರಸಭೆ ವತಿಯಿಂದ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸುವುದಿಲ್ಲ ಎಂದು ಡಿಸಿ ತಿಳಿಸಿದ್ದಾರೆ.
ನಿಮ್ಮ ಸುತ್ತಮುತ್ತ ಅನಧಿಕೃತ ಬಡಾವಣೆಗಳನ್ನು ರಚಿಸುತ್ತಿರುವ ಬಗ್ಗೆ ತಿಳಿದಲ್ಲಿ ತಕ್ಷಣ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ಹಾವೇರಿ ನಗರದಲ್ಲಿ ಬರುತ್ತಿರುವ ಅನಧಿಕೃತ ಬಡಾವಣೆಗಳನ್ನು ನಿರ್ಮೂಲನೆ ಮಾಡಲು ಪ್ರಾಧಿಕಾರದ ಜತೆ ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಅನಧಿಕೃತ ಬಡಾವಣೆ ತೆರವು
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1916 ಕಲಂ 15(4) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 33ರ ಅಡಿಯಲ್ಲಿ ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಬಡಾವಣೆಗಳನ್ನು ಪ್ರಾಧಿಕಾರದ ವತಿಯಿಂದ ತೆರೆವುಗೊಳಿಸಲಾಗುವುದು ಎಂದರು.












Click it and Unblock the Notifications