ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ; 86 ಕಲಾ ತಂಡಗಳಿಗೆ ಆಹ್ವಾನ
ಹಾವೇರಿ, ಫೆಬ್ರವರಿ 02: ಹಾವೇರಿಯಲ್ಲಿ 86ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಕಾರಣದಿಂದಾಗಿ 86 ವೈವಿಧ್ಯಮಯ ಕಲಾ ತಂಡಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 26, 27 ಮತ್ತು 28ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಜಿಲ್ಲೆ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ ಜಾನಪದ ಕಲಾ ತಂಡಗಳನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗುತ್ತದೆ.
ಕನ್ನಡ ನಾಡಿನ ಎಲ್ಲಾ ಕಲಾ ಪ್ರಕಾರಗಳ ತಂಡಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಅತ್ಯಂತ ವೈವಿಧ್ಯಮಯವಾಗಿ ಹಾಗೂ ಆಕರ್ಷಕವಾಗಿ ಮೆರವಣಿಗೆಯನ್ನು ಸಂಘಟಿಸಲು ಯೋಜನೆ ರೂಪಿಸಲಾಗುತ್ತಿದೆ.

ಕಲಾ ತಂಡಗಳ ಜೊತೆಗೆ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಸ್ಥಬ್ದಚಿತ್ರಗಳು ಹಾಗೂ ನಾಡಿನ ವಿವಿಧ ಅಭಿವೃದ್ಧಿ ಕಾರ್ಯಗಳ ಬಿಂಬಿಸುವ ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳಿಗೂ ಮೆರವಣಿಗೆಯಲ್ಲಿ ಇರಲಿವೆ.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ.
ನಗರದ ಪುರಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆ ಆರಂಭಗೊಳ್ಳಲಿದ್ದು, ಸಂಗೂರ ಕರಿಯಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತದ ಹಾಗೂ ಇಜಾರಿಲಕಮಾಪೂರ ಮಾರ್ಗವಾಗಿ ಸಮ್ಮೇಳನದ ಮುಖ್ಯ ವೇದಿಕೆ ತನಕ ಸಾಗಲಿದೆ. ಸಮ್ಮೇಳನದ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಮೆರವಣಿಗೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಖ್ಯ ವೇದಿಕೆ ತಲುಪಲಿದೆ.












Click it and Unblock the Notifications