ಹಾಸನ: ಡಿವೈಡರ್‌ಗೆ ಡಿಕ್ಕಿಯಾಗಿ ಮಿನಿ ಬಸ್ ಪಲ್ಟಿ, 12 ಜನರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
ಹಾಸನ, ಜೂನ್, 07: ಮದುವೆಗೆ ಜನರನ್ನು ಕರೆದೊಯ್ದು ವಾಪಾಸ್ ಬರುತ್ತಿದ್ದ ಮಿನಿ ಬಸ್ ಪಲ್ಟಿಯಾದ ಘಟನೆ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ, ಕಾರೇಕೆರೆ ಗೇಟ್ ಬಳಿ ನಡೆದಿದೆ.
ಹಾಸನ ತಾಲೂಕಿನ ಕಾರೇಕೆರೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 75ರಲ್ಲಿ KA-13 B-7339 ನಂಬರ್‌ನ ಮಿನಿ ಬಸ್ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ ಇಬ್ಬರ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಬಳಿಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಸನದ ಗುಂಡೇಗೌಡನ ಕೊಪ್ಪಲು ನಿವಾಸಿಗಳು ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗಿ ಹಾಸನಕ್ಕೆ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬಸ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.
ಲಾರಿ-ಬಸ್ ನಡುವೆ ಅಪಘಾತ, ಇಬ್ಬರು ಸಾವು
ಅದೇ ರೀತಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ಈ ವೇಳೆ ಲಾರಿ ಹಾಗೂ ಬಸ್ ಚಾಲಕರು ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.
ಬಳ್ಳಾರಿ ಸಮೀಪದ ಸೋಮಸಮುದ್ರ ಗ್ರಾಮದ ಹೊರವಲಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಈ ದೃಶ್ಯವನ್ನು ಕಂಡ ಕಂಡ ಸ್ಥಳೀಯರು ದಿಗ್ಭ್ರಾಂತರಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದವು. ಈ ಭೀಕರ ಅಪಘಾತದಲ್ಲಿ ಸರ್ಕಾರಿ ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದವು. ಬಳಿಕ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.












Click it and Unblock the Notifications