ಮದವೇರಿದ ಕಾಡಾನೆಯೊಂದಿಗೆ ಏಕಾಂಗಿಯಾಗಿ ಕಾದಾಡಿದ ಅರ್ಜುನನ ಕೊನೆಯ ವಿಡಿಯೋ ಭಾರೀ ವೈರಲ್
ಹಾಸನ, ಜನವರಿ, 30: ಸತತವಾಗಿ 8 ಬಾರಿ ನಾಡದೇವತೆ ಮೈಸೂರು ಚಾಮುಂಡೇಶ್ವರಿಯ ತಾಯಿಯ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿತ್ತು. ಇನ್ನು ಸಾಯುವ ಮುನ್ನ ಇದು ಏಕಾಂಗಿಯಾಗಿ ಕಾಡಾನೆ ಜೊತೆ ಯಾವುದೇ ಭಯವಿಲ್ಲದೆ ದಿಟ್ಟತನದಿಂದ ಕಾದಾಡಿದ್ದ ಕೊನೆಯ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಈ ವಿಡಿಯೋಗೆ ಪ್ರತಿಕ್ರಿಯೆಗಳು ಹರಿದುಬರುತ್ತಲೇ ಇವೆ.
ಕಾಡಾನೆ ಜೊತೆ ಅರ್ಜುನ ದಿಡ್ಡತನದಿಂದ ಏಕಾಂಗಿಯಾಗಿ ಕಾದಾಡಿದ ರಣರೋಚಕ ವಿಡಿಯೋ ಪ್ರವೀಣ್ ಇಟಿಎಫ್ ಸಕಲೇಶಪುರ ಎನ್ನುವ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮದವೇರಿದ ಕಾಡಾನೆ ಜೊತೆಗೆ ಏಕಾಂಗಿಯಾಗಿ ಯಾವುದೇ ಭಯವಿಲ್ಲದೆ ವೀರಾವೇಶದಿಂದ ಹೋರಾಡಿರುವ ಅರ್ಜುನ ಬಲಿಷ್ಠ ಕಾಡಾನೆ ದಾಳಿಗೆ ತೀವ್ರ ಗಾಯಗೊಂಡು ಸಾವಿಗೀಡಾಗಿತ್ತು. ಡಿಸೆಂಬರ್ 4ರಂದು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಈ ಕಾಳಗ ನಡೆದಿದ್ದು, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿಸಲಗವೊಂದು ದೀಢೀರ್ ಬಂದು ಅರ್ಜುನನ ಮೇಲೆ ಎರಗಿತ್ತು.
ಮದವೇರಿದ ಕಾಡಾನೆ ಬರುತ್ತಲೇ ಬೇರೆ ಸಾಕಾನೆಗಳು ಸ್ಥಳದಿಂದ ಹೆದರಿ ಕಾಲ್ಕಿತ್ತವು. ಬಳಿಕ ಕಾಡಾನೆ ಜೊತೆ ಕಾಳಗಕ್ಕೆ ಏಕಾಂಗಿಯಾಗಿ ಹೋರಾಟಕ್ಕೆ ಮುಂದಾದಾಗ ಕ್ಯಾಪ್ಟನ್ ಅರ್ಜುನ ವೀರಮರಣ ಹೊಂದಿದ್ದ. ಅರ್ಜುನನ ಈ ರೋಚಕ ಕಾದಾಟದ ಕೊನೇ ಕ್ಷಣದ ಎರಡು ತಂಗಳ ಹಿಂದಿನ ವೀಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಇನ್ನು ಹಾಸನ ಜಿಲ್ಲೆಯ ಸಕಲೇಶಪು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತುಸು ಹೆಚ್ಚಾಗಿಯೇ ಇದ್ದು, ಇವುಗಳ ದಾಳಿಯಿಂದ ಬರೀ ಜಮೀನುಗಳ ನಾಶ ಮಾತ್ರವಲ್ಲದೆ, ಮಾನವ ಹಾನಿಯಾಗಿರುವ ಉದಾಹರಣೆಗಳು ಇವೆ. ಇದರಿಂದ ಬೇಸತ್ತ ಈ ಭಾಗದ ಜನರು ಕಾಡಾನೆಗಳನ್ನು ಸೆರೆಹಿಡಿಯುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಈಗಲೂ ಕೂಡ ಈ ಭಾಗದಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗುತ್ತಲಿದ್ದು, ಇದರಿಂದ ಇಲ್ಲಿನ ಜನರು ತತ್ತರಿಸಿಹೋಗಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ.












Click it and Unblock the Notifications