ಮಂಜೇಗೌಡ ರಾಜೀನಾಮೆ ಅಂಗೀಕಾರ, ಎಚ್.ಡಿ.ರೇವಣ್ಣ ವಿರುದ್ಧ ಸ್ಪರ್ಧೆ

Posted By: Gururaj
Subscribe to Oneindia Kannada

ಹಾಸನ, ಏಪ್ರಿಲ್ 11 : ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಬಿ.ಪಿ.ಮಂಜೇಗೌಡರು ಸರ್ಕಾರಿ ಹುದ್ದೆಗೆ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷ ಅವರನ್ನು ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನವೆಂಬರ್ 3ರಂದು ತಮ್ಮ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ರಾಜೀನಾಮೆಯನ್ನು ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಗೀಕರಿಸಿದ್ದವು. ಆದರೆ, ಕಾನೂನು ಇಲಾಖೆ ಮಾತ್ರ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ. ಮಂಗಳವಾರ ಎಲ್ಲಾ ಕಾನೂನು ಇಲಾಖೆಯೂ ರಾಜೀನಾಮೆ ಅಂಗೀಕರಿಸಿದೆ.

Karnataka Govt employees association president BP Manje Gowda resigns

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ದಾಳಿ ಮತ್ತು ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿ.ಪಿ.ಮಂಜೇಗೌಡ ಅವರು ಆರೋಪಿಯಾಗಿದ್ದರು. ಆದ್ದರಿಂದ ಸಕ್ಷಮ ಪ್ರಾಧಿಕಾರಗಳು ಒಪ್ಪಿಗೆ ನೀಡುವ ತನಕ ರಾಜೀನಾಮೆ ಅಂಗೀಕಾರವಾಗಿರಲಿಲ್ಲ.

ಎಚ್.ಡಿ.ರೇವಣ್ಣ ಸೋಲಿಸಲು ಸಿದ್ದರಾಮಯ್ಯ ತಂತ್ರ!

ಎರಡು ಪ್ರಕರಣಗಳಲ್ಲಿ ಆರೋಪಗಳು ಸಾಬೀತಾದರೆ ಪಿಂಚಣಿ ಮತ್ತು ಭವಿಷ್ಯ ನಿಧಿ ಮುಟ್ಟುಗೋಲು ಹಾಕಿಕೊಳ್ಳುವ ಷರತ್ತಿಗೆ ಒಳಪಟ್ಟು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಇದರಿಂದಾಗಿ ಮಂಜೇಗೌಡ ಅವರು ಚುನಾವಣೆಗೆ ಸ್ಪರ್ಧಿಸಲು ಹಾದಿ ಸುಗಮವಾಗಿದೆ.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನವನ್ನು ಮಂಜೇಗೌಡ ಅವರು ತ್ಯಜಿಸಿದ್ದು, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ರಾಮ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಹೊಳೆನರಸೀಪುರ : ರೇವಣ್ಣ ಪಾರುಪತ್ಯ ಮುಂದುವರೆಯಲಿದೆಯೇ?

ಚುನಾವಣೆಗೆ ಸ್ಪರ್ಧೆ : ಬಿ.ಪಿ.ಮಂಜೇಗೌಡ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಡಿ.ರೇವಣ್ಣ ಅವರನ್ನು ಸೋಲಿಸಬೇಕು ಎಂದು ಮಂಜೇಗೌಡ ಅವರನ್ನು ಚುನಾವಣಾ ಕಣಕ್ಕೆ ಇಳಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಂಜೇಗೌಡ ಅವರು ಹೊಳೆನರಸೀಪುರ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃವಾಗಿ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

ಮಾರ್ಚ್ ತಿಂಗಳಿನಲ್ಲಿ ಸಿದ್ದರಾಮಯ್ಯ ಮತ್ತು ಮಂಜೇಗೌಡ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಬಹಿರಂಗವಾಗಿತ್ತು. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಹಾಸನಕ್ಕೆ ಹೋಗು ಎಂದು ಸಿದ್ದರಾಮಯ್ಯ ಅವರು ಮಂಜೇಗೌಡ ಅವರಿಗೆ ಸೂಚನೆ ನೀಡುವ ಸಂಭಾಷಣೆ ಆಡಿಯೋದಲ್ಲಿತ್ತು.

'ಮಂಜೇಗೌಡನ ಈ ಸಲ ಕ್ಯಾಂಡಿಡೇಟ್ ಮಾಡುತ್ತೇವೆ. ಎಲ್ಲಾ ಸೇರಿ ಗೆಲ್ಲಿಸಿ, ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು' ಎಂದು ಸಿದ್ದರಾಮಯ್ಯ ಅವರು ಸೋಮಣ್ಣ ಎಂಬುವವರಿಗೆ ಸೂಚಿಸಿದ್ದರು.

4 ಬಾರಿ ಗೆದ್ದಿದ್ದಾರೆ : ಎಚ್.ಡಿ.ರೇವಣ್ಣ ಅವರು 1994ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಿ.ಪುಟ್ಟಸ್ವಾಮಿ ಗೌಡರನ್ನು ಸೋಲಿಸಿ, ಗೆಲುವು ಕಂಡರು. ಇಲ್ಲಿಯವರೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1996 ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ವಸತಿ ಸಚಿವರಾಗಿ ಕೆಲಸ ಮಾಡಿದರು. 2004ರಲ್ಲಿ ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಲೋಕೋಪಯೋಗಿ ಸಚಿವರಾದರು. ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.

1999ರಲ್ಲಿ ಕಾಂಗ್ರೆಸ್ ನ ಎ.ದೊಡ್ಡೇಗೌಡರ ವಿರುದ್ಧ ರೇವಣ್ಣ ಒಮ್ಮೆ ಸೋಲನ್ನೂ ಕಂಡಿದ್ದಾರೆ. ಈ ಬಾರಿಯ ಚುನಾವಣೆಗೂ ಅವರಿಗೆ ಟಿಕೆಟ್ ಖಚಿತವಾಗಿದೆ. ರೇವಣ್ಣ ಅವರನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಮಂಜೇಗೌಡರನ್ನು ಕಣಕ್ಕೆ ಇಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President of Karnataka State Government Employees Association B.P.Manje Gowda resigned for the government job. B.P.Manje Gowda will contest for Karnataka assembly elections 2018 from Holenarasipur assembly constituency, Hassan as Congress candidate. JD(S) leader H.D.Revanna sitting MLA of the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ