HD Revanna vs Preetham Gowda: ಎಚ್‌ಡಿ ರೇವಣ್ಣಗೆ ಠಕ್ಕರ್ ನೀಡಲು ಸಜ್ಜಾದ ಪ್ರೀತಂ ಗೌಡ; ಹೊಳೇನರಸೀಪುರದಿಂದ ನಾಮಪತ್ರ ಸಲ್ಲಿಕೆ?
ಹಾಸನ, ಏಪ್ರಿಲ್ 20: ಕರ್ನಾಟಕ ವಿಧಾನಸಭೆ ಚುನಾವಣೆಯ ತಯಾರಿ ಎಲ್ಲ ಪಕ್ಷಗಳಲ್ಲಿ ಜೋರಾಗಿ ನಡೆಯುತ್ತಿದ್ದು, ರಾಜಕೀಯ ವಿರೋಧಿಗಳ ವಿರುದ್ಧ ಗೆಲ್ಲಲು ಚುನಾವಣೆಯೊಂದೇ ಅಸ್ತ್ರವಾಗಲಿದೆ. ರಾಜ್ಯದ ವಿಧಾನಸಭೆ ಚುನಾವಣೆಗಾಗಿ ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಇದೆ ವೇಳೆ ರಾಜ್ಯದ ಗಮನ ಸೆಳೆದಿರುವ ಹಾಸನ ಜಿಲ್ಲೆಯಲ್ಲಿ ದಿನಕ್ಕೊಂದು ಟ್ವಸ್ಟ್ ಸಿಗುತ್ತಿದ್ದು, ಈಗಾಗಲೇ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಪ್ರೀತಂ ಗೌಡ ಅವರು ಇದೀಗ, ತಮ್ಮ ರಾಜಕೀಯ ಎದುರಾಳಿ ಎಚ್.ಡಿ. ರೇವಣ್ಣ ವಿರುದ್ಧ ಸ್ಪರ್ಧಿಸಲು ತಯಾರಾಗಿದ್ದಾರೆ. ಹೀಗಾಗಿ ಹೊಳೇನರಸೀಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

ಇದೇ ವೇಳೆ, ಬುಧವಾರದಂದು ಹಾಸನ ಕ್ಷೇತ್ರದಲ್ಲಿ ಶಾಸಕ ಪ್ರೀತಂ ಗೌಡ ಅವರ ಪತ್ನಿ ಕಾವ್ಯ ಪ್ರತ್ಯೇಕವಾಗಿ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿರುವುದು ಭಾರೀ ಕುತೂಹಲ ಮೂಡಿಸಿದೆ. ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ಹೊಳೇನರಸೀಪುರ ಕ್ಷೇತ್ರದಲ್ಲಿ ಎಚ್.ಡಿ. ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಗುರುವಾರ ಬೆಳಗ್ಗೆ ಹಾಸನದ ಗುಡ್ಡೆನಹಳ್ಳಿಯಲ್ಲಿ ಮಾತನಾಡಿದ ಶಾಸಕ ಪ್ರೀತಂ ಗೌಡ, " ನಾಮಪತ್ರ ಸಲ್ಲಿಸಲು ಇಂದು 4 ಗಂಟೆಯವರೆಗೂ ಸಮಯವಿದೆ. ಪಕ್ಷದ ವರಿಷ್ಠರು ಸೂಚಿಸಿದರೆ, ಹೊಳೇನರಸೀಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಿದ್ಧ," ಎಂದು ಹೇಳಿದ್ದಾರೆ.
"ವರಿಷ್ಠರ ಸೂಚನೆ ಬಂದ ಬಳಿಕ, ಮಧ್ಯಾಹ್ನದ ವೇಳೆಗೆ ಶುಭಸುದ್ದಿ ನೀಡುತ್ತೇನೆ. ಚುನಾವಣೆ ನಡೆಯುವವರೆಗೂ ನಾನು ದೊಡ್ಡ ಕುಟುಂಬದ ಬಗ್ಗೆ ಮಾತನಾಡುವುದಿಲ್ಲ. ಫಲಿತಾಂಶ ಬಂದ ಬಳಿಕ ನಾನು ಮಾತನಾಡುತ್ತೇನೆ," ಎಂದು ಪ್ರೀತಂ ಗೌಡ ಪ್ರಚಾರದ ವೇಳೆ ಮಾತನಾಡಿದರು.

ಪ್ರೀತಂ ಗೌಡ ವಿರುದ್ಧ ಸ್ಪರ್ಧಿಸಲು ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಾಕಷ್ಟು ಪ್ರಯತ್ನ ನಡೆಸಿದರೂ, ಕೊನೆಯ ಘಳಿಗೆಯಲ್ಲಿ ಟಿಕೆಟ್ ಮಿಸ್ ಆಗಿ ಸ್ವರೂಪ್ ಪ್ರಕಾಶ್‌ಗೆ ಜೆಡಿಎಸ್ ಟಿಕೆಟ್ ನೀಡಲಾಯಿತು. ಎಚ್.ಡಿ. ರೇವಣ್ಣ ಮತ್ತು ಅವರ ಕುಟುಂಬದ ಯಾರೋಬ್ಬರು ಹಾಸನದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಲಿಲ್ಲ. ಹಾಗಾಗಿ, ಪ್ರೀತಂ ಗೌಡ ಅವರೇ ಎಚ್.ಡಿ. ರೇವಣ್ಣ ಅವರನ್ನು ಹುಡುಕಿಕೊಂಡು ಹೋಗಲು ನಿರ್ಧರಿಸಿದಂತಿದೆ.
ಇದೀಗ ಪ್ರೀತಂ ಗೌಡ ನೀಡಿರುವ ಹೇಳಿಕೆ, ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧದ ಜಿದ್ದಾಜಿದ್ದಿನ ಪೈಪೋಟಿಯನ್ನು ಹಾಸನದಿಂದ ಹೊಳೇನರಸೀಪುರಕ್ಕೆ ಸ್ಥಳಾಂತರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ಮಧ್ಯೆ ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ಪತ್ನಿ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ಕುತೂಹಲಕ್ಕೆ ದಾರಿಮಾಡಿಕೊಟ್ಟಿದೆ.
ಹಾಸನ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದಾದ್ಯಂತ ಸದ್ದು ಮಾಡಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ. ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಿದರೆ 50 ಸಾವಿರ ಮತಗಳಿಗಿಂತ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತೇನೆ. ತಾಕತ್ತಿದ್ದರೆ ಎಚ್.ಡಿ. ರೇವಣ್ಣ ಹಾಸನ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು.
ಶಾಸಕ ಪ್ರೀತಂ ಗೌಡ ಸವಾಲನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಎಚ್.ಡಿ. ರೇವಣ್ಣ ತಮ್ಮ ಪತ್ನಿಯನ್ನು ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಪಟ್ಟರು. ಆದರೆ, ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಮಾಜಿ ಶಾಸಕ ಪ್ರಕಾಶ್ ಮಗ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಒಟ್ಟಿನಲ್ಲಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಹಾಸನ ಮತ್ತು ಹೊಳೇನರಸೀಪುರ ಕ್ಷೇತ್ರಗಳು ಸೇರಿವೆ. ಪ್ರೀತಂ ಗೌಡ ಅಂತಿಮವಾಗಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಗುರುವಾರ ಸಂಜೆ ವೇಳೆ ಖಚಿತವಾಗಲಿದೆ.












Click it and Unblock the Notifications