ಹಾಸನದಲ್ಲಿ ಮತದಾನ ಆರಂಭ: ಮೊದಲ ಮತದಾನ ಮಾಡಿದ 80 ವರ್ಷದ ವೃದ್ಧೆ
ಹಾಸನ, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈಗಾಗಲೇ ಮತದಾನ ಆರಂಭವಾಗಿದೆ. ಮೇ 10 ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಜನ ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮತದಾನ ಪ್ರಾರಂಭವಾಗಿದ್ದು, 80 ವರ್ಷದ ವೃದ್ಧೆ ಕಣ್ಣಮ್ಮ ಮೊದಲ ಮತದಾನ ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ತರಕಾರಿ ಮಾರುವ ಕಣ್ಣಮ್ಮ ಬುಧವಾರ ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಮತದಾನ ಮಾಡಬೇಕು ಎನ್ನುವ 80 ವರ್ಷದ ವೃದ್ಧೆಯ ಉತ್ಸಾಹ ಕಂಡು ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದ್ದು, ಕ್ಷೇತ್ರದ ಶಾಸಕರನ್ನು ಆಯ್ಕೆ ಮಾಡಲು ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೂ ಮತದಾನ ನಡೆಯಲಿದೆ. ಏಳು ವಿಧಾನಸಭಾ ಕ್ಷೇತ್ರಗಳ 73 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಜಿಲ್ಲೆಯಲ್ಲಿ ಒಟ್ಟು 14,99,917 ಮತದಾರರಿದ್ದು, 7,49,720 ಪುರುಷ ಹಾಗೂ 7,50,153 ಮಹಿಳಾ ಮತದಾರರಿದ್ದಾರೆ. ಹಾಗೂ ಈ ಬಾರಿ 27,135 ಯುವ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ 10,910 ಮಂದಿ ನೇಮಕ ಮಾಡಲಾಗಿದ್ದು, 10 ರಿಂದ 12 ಮತಗಟ್ಟೆಗಳಿಗೊಬ್ಬರಂತೆ 223 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 643 ಸೂಕ್ಷ್ಮ ಹಾಗೂ 10 ಅತೀ ಸೂಕ್ಷ್ಮ ಎಂದು ಗುರುತು ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 78.77 ರಷ್ಟು ಮತದಾನವಾಗಿತ್ತು.











Click it and Unblock the Notifications