ಹಾಸನ ಜಿಲ್ಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
ಹಾಸನ, ಜೂನ್ 16 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜೂ.18ರಂದು ಅರಸೀಕೆರೆ ತಾಲೂಕಿನ ಜೆ.ಸಿ.ಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಹಾಸನ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಕುರಿತು ಪೂರ್ವ ಭಾವಿ ಸಭೆ ನಡೆಸಿದ್ದಾರೆ. ಜೂ.18 ರಂದು ಹಾನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ.ಪುರದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜೂ.18ರಂದು ಅರಸೀಕೆರೆ ತಾಲೂಕಿನ ಗಂಡಸಿಗೆ ಸಂಜೆ 5 ಗಂಟೆಗೆ ಆಗಮಿಸುವ ಕುಮಾರಸ್ವಾಮಿ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಲಿರುವರು. ಅಂದು ಕಣಕಟ್ಟೆ ಹೋಬಳಿಯ ಜೆ.ಸಿ.ಪುರದಲ್ಲಿ ಸಂಜೆ 6 ಗಂಟೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸುವುದರ ಜೊತೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ವಿವಿಧ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ಎನ್. ವಿಜಯ್ ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳೂ ಸಹ ಇದೇ ವೇಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯಕ್ಕೆ ಪೂರಕವಾಗಿ ಕಣಕಟ್ಟೆಯ ಜೆ.ಸಿ.ಪುರದ ಶಾಲೆ, ವಿದ್ಯಾರ್ಥಿನಿಲಯ, ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ದತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಈ ಎರಡು ಹೋಬಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಮುಖ್ಯಮಂತ್ರಿಯವರು ಜೂ.18ರಂದು ಗ್ರಾಮ ವಾಸ್ತವ್ಯ ಮಾಡಲಿದ್ದು, ಜೂ.19ರಂದು ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಿದ್ದಾರೆ ಎಲ್ಲಾ ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿ ಅಗತ್ಯ ಮಾಹಿತಿಯೊಂದಿಗೆ ಹಾಜರಿರಬೇಕು ಎಂದು ಸೂಚಿಸಲಾಗಿದೆ.
ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಸಿನೆಡುವ ಕಾರ್ಯಕ್ರಮ, ವಿವಿಧ ರೀತಿ ಜಾಗೃತಿ ಚಟುವಟಿಕೆಗಳು ನಡೆಯಲಿದೆ. ಗ್ರಾಮ ವಾಸ್ತವ್ಯವನ್ನು ಯಾವುದೇ ರೀತಿಯ ಲೋಪಗಳಿಲ್ಲದಂತೆ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.












Click it and Unblock the Notifications