ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ನಂತರವೇ ನೆಮ್ಮದಿ ಸಿಗುತ್ತೆ ಎಂದ ದೇವೇಗೌಡ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಭರ್ಜರಿ ಪ್ರಚಾರ ಮಾಡಿದರು. ಸಮಾವೇಶದಲ್ಲಿ ಭಾವುಕರಾಗಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡ ನಂತರವೇ ನನಗೆ ಸಮಾಧಾನವಾಗುತ್ತದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಸಭೆಗೆ ಮುನ್ನ ಮಾತನಾಡಿದ ಅವರು, ಹಾಸನದಲ್ಲಿ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳನ್ನು ಹಾಳು ಮಾಡಿದ ಪ್ರೀತಂ ಜೆ ಗೌಡರನ್ನು ಸೋಲಿಸುವುದನ್ನು ನೋಡಬೇಕು ಎಂದು ಹೇಳಿದರು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವ ಬಿಜೆಪಿಗೆ ಒಂದೂ ಮತವನ್ನು ಹಾಕದಂತೆ ದೇವೇಗೌಡ ಕರೆ ನೀಡಿದರು.

ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ಅಲ್ಪಸಂಖ್ಯಾತರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಜಾತ್ಯಾತೀತವಾಗಿದ್ದು, ಧರ್ಮದ ಆಧಾರದ ಮೇಲೆ ಎಂದಿಗೂ ತಾರತಮ್ಯ ಮಾಡಲ್ಲ ಎಂದು ಹೇಳಿದರು. ಆತುರದಲ್ಲಿ ಹೇಳಿಕೆ ತಮ್ಮ ಕುಟುಂಬಕ್ಕೆ ಅವಮಾನ ಮಾಡಿದ ಬಿಜೆಪಿ ಅಭ್ಯರ್ಥಿ ಹೆಸರು ಹೇಳಲು ಇಷ್ಟವಿಲ್ಲ, ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಮತ ಹಾಕಿ ನೋವು ಕೊಡಬೇಕು ಎಂದು ಮನವಿ ಮಾಡಿದರು.
ತಮ್ಮ ಕೊನೆಯ ಉಸಿರು ಇರುವವರೆಗೂ ಸಮಸ್ಯೆಗಳ ವಿರುದ್ಧ ಹೋರಾಡುವುದಾಗಿ ತಿಳಿಸಿದ ಅವರು, ಇಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದನ್ನು ನೋಡಬೇಕು, ಮೂರು ಬಾರಿ ಪ್ರಧಾನಿಯನ್ನು ಭೇಟಿ ಮಾಡಿ ಐಐಟಿ ಸ್ಥಾಪನೆಗೆ ಮನವಿ ಮಾಡಿದರೂ, ಪ್ರಸ್ತಾವನೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ರಾಜ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮಾತನಾಡಿದರು.
ಜೆಡಿಎಸ್ ವಶವಾಗುತ್ತಾ ಹಾಸನ?
ಜೆಡಿಎಸ್‌ನ ಭದ್ರಕೋಟೆಯಲ್ಲಿ ಪ್ರೀತಮ್ ಗೌಡ 2018ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ದೇವೇಗೌಡ ಕುಟುಂಬ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದೆ.
ಜೆಡಿಎಸ್‌ನಿಂದ ಸ್ವರೂಪ್ ಗೌಡ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ವರಿಷ್ಠರು ಒಗ್ಗಟ್ಟಾಗಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಕೂಡ ಮುನಿಸು ತೊರೆದು ಮೊದಲ ದಿನದಿಂದಲೇ ಹಾಸನದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದು, ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.












Click it and Unblock the Notifications