Lok Sabha Election 2024 Result: ಹಾಸನದಲ್ಲಿ ಪ್ರಜ್ವಲ್ ಭಾರೀ ಹಿನ್ನಡೆ
ಹಾಸನ, ಜೂನ್ 04: ಹಾಸನ ಲೋಕಸಭೆ ಕ್ಷೇತ್ರದ 2024ರ ಚುನಾವಣೆಯಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾರೀ ಹಿನ್ನಡೆಯಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಸದ್ಯ ಎಸ್‌ಐಟಿ ವಶದಲ್ಲಿದ್ದಾರೆ.
ಹಾಸನ ನಗರದ ಡೈರಿ ವೃತ್ತದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಭಾರೀ ಮುನ್ನಡೆ ಪಡೆದುಕೊಂಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ 29,910 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ 4,76,314 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 503424 ಮತಗಳನ್ನು ಪಡೆದುಕೊಂಡಿದ್ದಾರೆ.
ಏಪ್ರಿಲ್ 26ರಂದು ಹಾಸನ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು. ಆದರೆ ಮತದಾನಕ್ಕೂ 2 ದಿನ ಮೊದಲು ಸಂಸದ ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋಗಳು ಕ್ಷೇತ್ರದಲ್ಲಿ ಪೆನ್ ಡ್ರೈವ್ ಮೂಲಕ ಹಂಚಿಕೆಯಾದವು.
ಮತದಾನ ಮಾಡಿದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾದರು. ಕರ್ನಾಟಕ ಸರ್ಕಾರ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿದೆ.
ಮೇ 31ರಂದು ವಿದೇಶದಿಂದ ಮರಳಿದ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿತು. ಲೋಕಸಭೆ ಚುನಾವಣೆಯಲ್ಲಿ ಪೆನ್ ಡ್ರೈವ್ ಪ್ರಕರಣ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಕ್ಷೇತ್ರದಲ್ಲಿ 7780 ನೋಟಾ ಮತಗಳು ಚಲಾವಣೆಗೊಂಡಿವೆ.
ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ನಾಯಕರು ವಿರೋಧಿಸುತ್ತಿದ್ದರು ಎಂಬ ಮಾಹಿತಿ ಇತ್ತು. ಆದರೆ ಮೈತ್ರಿ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿ-ಜೆಡಿಎಸ್ ಜಂಟಿಯಾಗಿ ಚುನಾವಣಾ ಪ್ರಚಾರವನ್ನು ನಡೆಸಿದ್ದರು.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಅಶ್ಲೀಲ ವಿಡಿಯೋ ಪ್ರಕರಣ ಪ್ರಜ್ವಲ್ ರೇವಣ್ಣ ಗೆಲುವಿಗೆ ಅಡ್ಡಿಯಾಗುವ ನಿರೀಕ್ಷೆ ಇದೆ. ಕೋಲಾರದಲ್ಲಿ ಮಲ್ಲೇಶ್ ಬಾಬು, ಮಂಡ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.
ಸದ್ಯದ ಮಾಹಿತಿಯಂತೆ ಹಾಸನದಲ್ಲಿ 17ನೇ ಸುತ್ತು ಪೂರ್ಣಗೊಂಡಿದೆ. ಪ್ರಜ್ವಲ್ ರೇವಣ್ಣ 5,89,829. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 632090 ಮತಗಳನ್ನು ಪಡೆದಿದ್ದಾರೆ. 42,261 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. 80,98 ನೋಟಾ ಮತಗಳು.












Click it and Unblock the Notifications