Prajwal Revanna: ದಳಪತಿಗಳ ಭದ್ರಕೋಟೆ ಛಿದ್ರ ಛಿದ್ರ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹೀನಾಯ ಸೋಲು
ಹಾಸನ, ಜೂನ್ 04: ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಕಾವು ಜೋರಾಗಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹಾಸನದಲ್ಲಿ 17ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,32,090 ಮತಗಳನ್ನು ಪಡೆದಿದ್ದಾರೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 5,89,829 ಮತಗಳನ್ನು ಪಡೆದಿದ್ದು, 8098 ನೋಟಾ ಮತಗಳು ಚಲಾವಣೆ ಆಗಿದೆ. 42261 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಸದ್ಯದ ಫಲಿತಾಂಶದ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆ ಬಾಕಿ ಇದೆ.
ಲೋಕಸಭೆ ಚುನಾವಣೆ 2024ರಲ್ಲಿ ಪ್ರಜ್ವಲ್ ರೇವಣ್ಣ ಕಾರಣಕ್ಕೆ ಹಾಸನ ಕ್ಷೇತ್ರದ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಶೇ 77.68ರಷ್ಟು ಮತದಾನ ನಡೆದಿತ್ತು. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದು, ಸದ್ಯ ಎಸ್‌ಐಟಿ ವಶದಲ್ಲಿದ್ದಾರೆ.
ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಈ ಪ್ರಕರಣ ಬೆಳಕಿಗೆ ಬರುವ ಸಮಯದಲ್ಲಿ ಮತದಾನ ಮಾಡಿ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ ಇತ್ತೀಚಿಗೆ ರಾಜ್ಯಕ್ಕೆ ವಾಪಸ್ ಆಗಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.












Click it and Unblock the Notifications