ಹಾಸನದಲ್ಲಿ ತೊಡೆ ತಟ್ಟಿದ ಎಚ್.ಡಿ.ರೇವಣ್ಣ; ಯಾರ ವಿರುದ್ಧ ಗೊತ್ತಾ?
ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ವೇದಿಕೆ ಮೇಲೆಯೇ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಕೆಲವರನ್ನು ನಾನೇ ಸಾಕಿದ್ದೇನೆ. 15-20 ವರ್ಷ ಅವರಿಗೆ ಚೆನ್ನಾಗಿ ಮೇವು ಹಾಕಿ ಸಾಕಿದ್ದೆ. ಇವತ್ತು ಅವರೇ ನನ್ನ ಮೇಲೆ ಕುಸ್ತಿ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅವರೆಲ್ಲ ಎಲ್ಲಿ ಹೋಗ್ತಾರೆ? ನನ್ನ ಕೈಗೆ ಸಿಕ್ಕೇ ಸಿಗುತ್ತಾರೆ. ಇದೆಲ್ಲ ಇಂದೇ ಮುಗಿಯುವ ಕಥೆಗಳಲ್ಲ. ರೇವಣ್ಣನನ್ನ ಯಾವುದೋ ಒಂದು ಕೇಸ್ ಹಾಕಿ ಹೆದರಿಸಲು ಆಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

ಹಾಸನದಲ್ಲಿ ರೇವಣ್ಣನ ಕಥೆ ಮುಗಿದು ಹೋಯ್ತು. ರೇವಣ್ಣ ಹಾಗೂ ದೇವೇಗೌಡರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹಲವರು ತೊಡೆ ತಟ್ಟಿ ನಿಂತಿದ್ದಾರೆ. ಆದರೆ, ಈ ರೇವಣ್ಣನನ್ನ, ದೇವೇಗೌಡರನ್ನ ಮುಗಿಸಲು ಯಾರಿದಂಲೂ ಸಾಧ್ಯವಿಲ್ಲ. ಅವರಿಗೆಲ್ಲ ದೇವರೇ ಶಿಕ್ಷೆ ಕೊಡುವ ಕಾಲ ಬಂದೇ ಬರುತ್ತೆ. ಇನ್ನೊಂದು ನಾಲ್ಕೈದು ತಿಂಗಳು ಕಳೆಯಲಿ, ನಿಮಗೆ ಎಲ್ಲ ತಿಳಿಯುತ್ತದೆ ಎಂದು ತಮ್ಮ ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ್ದಾರೆ.
ನಾನು ಶಾಸಕನಾಗಿ ಮೂವತ್ತು ವರ್ಷಗಳು ಕಳೆಯುತ್ತಾ ಬಂದಿವೆ. ಹಾಸನದ ಜನ ನನಗೆ ಹಾಗೂ ತಂದೆ ದೇವೇಗೌಡರಿಗೆ, ಕುಮಾರಸ್ವಾಮಿಗೆ ಹಾಗೂ ನನ್ನ ಕುಟುಂಬಕ್ಕೆ ರಾಜಕೀಯ ಶಕ್ತಿಯನ್ನು ಕೊಟ್ಟಿದ್ದಾರೆ. ಇದನ್ನು ನಾವು ಜೀವ ಇರುವವರೆಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಕೈಲಾದಷ್ಟು ಈ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲನೇ ಸ್ಥಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಹಾಸನ ಹಾಲು ಒಕ್ಕೂಟದಲ್ಲಿ 122 ಕೋಟಿ ರೂಪಾಯಿ ಮೌಲ್ಯದ ಹಾಲಿನ ಉತ್ಪನ್ನಗಳು ಮಾರಾಟವಾಗದೆ ಇದೆ. ಹೀಗಾಗಿ ಹಾಲು ಉತ್ಪಾದಕರಿಗೆ ಮೂರು ವಾರಗಳ ಹಣ ನೀಡಲು ಆಗಲಿಲ್ಲ. ಒಕ್ಕೂಟದಿಂದ ಪ್ರತಿದಿನ 4.5 ಲಕ್ಷ ಲೀಟರ್ ಹಾಲನ್ನು ಉತ್ಪನ್ನಗಳಿಗೆ ಕಳುಹಿಸುತ್ತೇವೆ. ಡಿಮ್ಯಾಂಡ್ ಕಡಿಮೆ ಆಗಿದ್ದರಿಂದ 3,800 ಟನ್ ಹಾಲಿನ ಪೌಡರ್, 1,246 ಟನ್ ಬೆಣ್ಣೆ ಮಾರಾಟವಾಗಿಲ್ಲ. ಉತ್ಪನ್ನಗಳು ಸೇಲ್ ಆಗದೇ ಇದ್ದಿದ್ದರಿಂದ ಒಕ್ಕೂಟಕ್ಕೆ ಲಾಸ್ ಆಗಿದೆ ಎಂದಿದ್ದಾರೆ.
ನಮ್ಮ ಒಕ್ಕೂಟವು ಕೆಎಂಎಫ್‌ಗೆ ವರ್ಷಕ್ಕೆ 15 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟುತ್ತದೆ. ಸದ್ಯಕ್ಕೆ ಒಕ್ಕೂಟ ನಷ್ಟದಲ್ಲಿರುವುದರಿಂದ ಹಾಲಿನ ಉತ್ಪನ್ನಗಳ ಮಾರಾಟ ಮೇಲೆ ಕೆಎಂಎಫ್ ಹಾಕುತ್ತಿರುವ ಶೇ 6ರಷ್ಟು ಮಾರಾಟ ತೆರಿಗೆಯನ್ನು ಸ್ವಲ್ಪದಿನಗಳ ಮಟ್ಟಿಗೆ ಹಾಕದಂತೆ ಕೆಎಂಎಫ್‌ಗೆ ಮನವಿ ಮಾಡುತ್ತೇನೆ ಎಂದು ರೇವಣ್ಣ ತಿಳಿಸಿದ್ದಾರೆ.
ಮಾಜಿ ಸಂಸದ ಹಾಗೂ ರೇವಣ್ಣ ಅವರು ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಕೇಸ್‌ನಲ್ಲಿ ಸದ್ಯ ಜೈಲು ಸೇರಿದ್ದಾರೆ. ಇದೇ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ್ದ ಆರೋಪ ಎಚ್.ಡಿ.ರೇವಣ್ಣ ಅವರ ಮೇಲಿತ್ತು. ಈ ಸಂಬಂಧ ಜೈಲು ಸೇರಿದ್ದ ರೇವಣ್ಣ ಅವರು ಜಾಮೀನು ಪಡೆದು ಹೊರಬಂದಿದ್ದರು. ಮೊನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಷರತ್ತು ಸಡಿಲಿಕೆಗೊಳಿಸಿದೆ. ಇದರಿಂದ ರೇವಣ್ಣ ಅವರಿಗೆ ಹೊರ ರಾಜ್ಯಗಳಿಗೆ ಸಂಚರಿಸಲು ಅನುಮತಿ ಕೂಡ ಸಿಕ್ಕಿದೆ.












Click it and Unblock the Notifications