Hasanamba Jatra 2023: ಈ ಬಾರಿಯ ಹೊಸ ಕಾರ್ಯಕ್ರಮಗಳ ವಿವರ ಹೀಗಿದೆ
ಹಾಸನ, ಅಕ್ಟೋಬರ್, 27: ಈ ಬಾರಿಯ ಹಾಸನಾಂಬೆ ಉತ್ಸವದಲ್ಲಿ ಹೊಸ ಸಂಭ್ರಮ ಮೇಳೈಸಲಿದೆ. ದೇವಿಯ ದರ್ಶನದ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಪ್ಯಾಕೇಜ್ ಟೂರ್ ವ್ಯವಸ್ಥೆ, ಹಾಸನವನ್ನು ಆಗಸದಿಂದ ನೋಡಲು ಹೆಲಿ ಟೂರಿಸಂ, ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ಮಹಾರಾಜ ಪಾರ್ಕ್‌ನಲ್ಲಿ ಸಂಗೀತ ಕಾರಂಜಿ ಸೇರಿದಂತೆ ಇದೇ ಮೊದಲ ಬಾರಿಗೆ ಹಲವು ನವ ನವೀನ ಕಾರ್ಯಕ್ರಮಗಳ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇದೇ ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ನಡೆಲಿರುವ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. 10.8 ಕಿಲೋ ಮೀಟರ್ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಜರ್ಮನ್ ಟೆಂಟ್ ಜೊತೆಗೆ ಸರತಿ ಸಾಲಿನಲ್ಲಿ ಫ್ಯಾನ್, ಮ್ಯಾಟ್ ಹಾಕಲಾಗಿದೆ.

ಶೌಚಾಲಯ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗಿದೆ. ನಿರಂತರ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಮಕ್ಕಳಿಗೆ ಹಾಲುಣಿಸಲು ಎರಡು ಕೇಂದ್ರ ತೆರೆಯಲಾಗಿದೆ. ಮೆಡಿಕಲ್ ಕ್ಯಾಂಪ್, 2 ಆಂಬ್ಯುಲೆನ್ಸ್ ಸಜ್ಜುಗೊಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹೂವಿನ ಅಲಂಕಾರ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ. 4 ದಿನಕ್ಕೊಮ್ಮೆ ಹೂ ಬದಲಾವಣೆ ಮಾಡಲು ಸೂಚಿಸಲಾಗಿದೆ. ನಗರಕ್ಕೆ ಸ್ವಾಗತ ಕೋರುವ ನಾಲ್ಕು ಕಡೆಗಳಲ್ಲಿ ಸೇರಿ ಒಟ್ಟು 8 ಕಡೆ ಆರ್ಚ್ ನಿರ್ಮಾಣ ಮಾಡಲಾಗುತ್ತಿದೆ.
ರೈಲ್ವೆ ನಿಲ್ದಾಣ ಮುಂಭಾಗ ಲೈಟಿಂಗ್ ಆರ್ಚ್ ನಿರ್ಮಿಸಲಾಗುತ್ತಿದೆ. ಎಂದಿನಂತೆ ನಗರದಾದ್ಯಂತ ಲೈಟಿಂಗ್ ವ್ಯವಸ್ಥೆ ಇರಲಿದೆ. ಎಲ್ಲಾ ಭಕ್ತರಿಗೂ ದೊನ್ನೆ ಪ್ರಸಾದ, ಕುಡಿಯುವ ನೀರು, ಲಾಡು ಪ್ರಸಾದ ನೀಡಲು ಯೋಜಿಸಲಾಗಿದೆ, ಸಿಸಿ ಟಿವಿ ವೀಕ್ಷಣೆಗೆ ವಾರ್ ರೂಂ. ತೆರೆಯಲಾಗಿದೆ. ಖಾಸಗಿ ಕಟ್ಟಡ ಮಾಲೀಕರಿಗೂ ಲೈಂಟಿಂಗ್ ಮಾಡುವಂತೆಯೂ ಕೋರಲಾಗಿದೆ.
ಇದೇ ಮೊದಲ ಭಾರಿಗೆ ಹಾಸನಾಂಬೆ ಉತ್ಸವಕ್ಕೆ ಬರುವ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣ ನೋಡಲು ಸಕಲೇಶಪುರ ಮಾರ್ಗ, ಬೇಲೂರು-ಹಳೇಬೀಡು, ಅರಸೀಕೆರೆ, ಶ್ರವಣಬೆಳಗೊಳ ಹಾಗೂ ಸಕಲೇಶಪುರ ಪರಿಸರ ಪ್ರವಾಸ ಸೇರಿ ಒಟ್ಟು 5 ಪ್ಯಾಕೇಜ್ ಮಾರ್ಗ ಸಿದ್ಧಪಡಿಸಲಾಗಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಸಹಯೋಗ ಇದ್ದು, ಒಂದು ಬಸ್‌ನಲ್ಲಿ ಕನಿಷ್ಟ 20 ಮಂದಿ ಇರಬೇಕು. ವಯಸ್ಕರಿಗೆ, ಮಕ್ಕಳಿಗೆ ಒಂದೊಂದು ದರ ನಿಗದಿಪಡಿಸಲಾಗಿದೆ.
ಅಷ್ಟೇ ಅಲ್ಲದೆ ಹೆಲಿ ಟೂರಿಸಂ ಯೋಜನೆಯಡಿ ನವೆಂಬರ್ 3ರಿಂದ 6ರವರೆಗೆ ಆಗಸದಲ್ಲಿ ಹಾಸನ ಕಾರ್ಯಕ್ರಮದಡಿ ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 7 ನಿಮಿಷಕ್ಕೆ 4,300 ರೂಪಾಯಿ ನಿಗದಿ ಪಡಿಸಲಾಗಿದೆ. ಕೇವಲ 500-600 ಅಡಿ ಎತ್ತರದಲ್ಲಿ ಹಾಸನವನ್ನು ಮೇಲಿಂದ ಕಣ್ತುಂಬಿಕೊಳ್ಳಬಹುದಾಗಿದೆ.
ಈ ಬಾರಿ ಎಲ್ಲ ವಾಹನಗಳು ದೇವಾಲಯ ಆವರಣಕ್ಕೆ ಬರುವಂತಿಲ್ಲ. ಶಿಷ್ಟಾಚಾರ ಪಾಲನೆಗೆಂದೇ ಒಟ್ಟು 13 ವಾಹನ ಬಳಕೆ ಮಾಡಲಾಗುತ್ತಿದ್ದು, ಅವುಗಳ ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ. 1 ಸಾವಿರ ಮತ್ತು 300 ರೂಪಾಯಿಗೆ ಟಿಕೆಟ್‌ಗೆ ಬಾರ್ ಕೋಡ್ ಜೊತೆಗೆ ದುರ್ಬಳಕೆ ಮಾಡದಂತೆ ಗೋಲ್ಡ್ ಕೋಟ್ ಹಾಕಲಾಗಿದೆ. ಒಟ್ಟು ಮೂರು ಗೇಟ್ ಇರಲಿವೆ. ಮೂರೂ ಗೇಟ್‌ಗಳಲ್ಲೂ ಬಾರ್ ಕೋಡ್ ಸ್ಲ್ಯಾನ್ ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.












Click it and Unblock the Notifications