ಹಾಸನಾಂಬೆ ದರ್ಶನದ ಎಲ್ಲಾ ಪಾಸ್ ರದ್ದು-ಕಾರಣ ಏನು?
ಹಾಸನ, ಅಕ್ಟೋಬರ್, 31: ವರ್ಷಕ್ಕೊಮ್ಮೆ ದರ್ಶನ್ ಕರುಣಿಸುವ ಹಾಸನಾಂಬ ದೇಗುಲದ ಬಾಗಿಲನ್ನು ಅಕ್ಟೋಬರ್ 24ರಂದು ತೆರೆಯಲಾಯಿತು. ಇನ್ನು ಪ್ರತಿನಿತ್ಯವೂ ತಾಯಿ ದರ್ಶನ ಪಡೆಯಲು ಭಕ್ತ ದಂಡೇ ಹರಿದುಬರುತ್ತಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಆಡಳಿತ ಮಂಡಳಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬ ತಾಯಿಯ ದರ್ಶನಕ್ಕೆ ಜನರು ಸಾಲುಗಟ್ಟಿ ನಿಲುತ್ತಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಜನಜಂಗುಳಿ ಏರ್ಪಡುತ್ತಿದೆ. ಈ ಹಿನ್ನೆಲೆ ಹಾಸನಾಂಬ ಆಡಳಿತ ಮಂಡಳಿಯಿಂದ ಎಲ್ಲಾ ಪಾಸ್ ರದ್ದುಮಾಡಿ ಆದೇಶ ಹೊರಡಿಸಲಾಗಿದೆ. ಸದ್ಯ ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಪಾಸ್ ಬಿಟ್ಟು ಬೇರೆ ಎಲ್ಲಾ ಪಾಸ್ ರದ್ದು ಮಾಡಿರುವುದಾಗಿ ತಿಳಿಸಿದೆ.

ಇನ್ನೂ ಹಾಸನಾಂಬೆ ದರ್ಶನಕ್ಕೆ ಈಗ ಮಳೆ ಅಡ್ಡಿಯಾಗಿದೆ. ಭಾರೀ ಮಳೆ ಹಿನ್ನೆಲೆ ಮಕ್ಕಳು, ಜನರು ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ. ಅಲ್ಲದೇ ಭಕ್ತರನ್ನು ನಿಯಂತ್ರಣ ಮಾಡಲು ಪೊಲೀಸರು ಕೂಡ ಹರಸಾಹಸ ಪಡುವಂತಾಗಿದೆ.
ಹಾಸನಾಂಬ ದೇವಸ್ಥಾನದ ಇತಿಹಾಸ: ಹಾಸನ ಜಿಲ್ಲೆಯ ಜನರ ಶಕ್ತಿ ದೇಸವತೆ ಹಾಸನಾಂಬ ದೇವಾಲಯ 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕರೆಂಬ ಪಾಳೆಗಾರರ ಕಾಲದಲ್ಲಿ ನಿರ್ಮಾಣವಾಗಿದೆ. ಇನ್ನು ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ವಾಯು ವಿಹಾರದ ಸಲುವಾಗಿ ದಕ್ಷಿಣದ ಕಡೆಗೆ ಬಂದರು. ರಕೃತಿ ಸೊಬಗಿನ ನಾಡು ಹಾಸನಕ್ಕೆ ಮಾರುಹೋಗಿ ಇಲ್ಲೇ ನೆಲಸಿದರು. ಹಾಸನಾಂಬೆಯು ಹಾಸನದಲ್ಲಿ ನೆಲೆಸಿದ್ದರಿಂದ ಇಲ್ಲಿಗೆ ಹಾಸನ ಎಂದು ಹೆಸರು ಬಂತು ಅಂತ ಹೇಳಲಾಗುತ್ತಿದೆ.
ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ, ಕೌಮಾರಿ ದೇವರಿಯರು ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದರೆ, ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಬ್ರಾಹ್ಮಿ ದೇವಿ ನೆಲಸಿದ್ದಾಳೆ. ಚಾಮುಂಡಿ, ವಾರಾಹಿ, ಇಂದ್ರಾಣಿಯರು ಹಾಸನ ನಗರದಲ್ಲಿ ದೇವಿಗೆರೆಯಲ್ಲಿ ನೆಲೆಸಿದ್ದಾರೆ.
ವರ್ಷಕ್ಕೊಮ್ಮೆ ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ದೇಗುಲದ ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೆ ದಿನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲು ಬಂದ್ ಮಾಡಲಾಗುತ್ತದೆ. ಮತ್ತೆ ದೇವಿ ದರ್ಶನ ಸಿಗುವದು ವರ್ಷ ಕಳೆಯಬೇಕಾಗುತ್ತದೆ. ಇನ್ನು ಈ ವರ್ಷ ಅಕ್ಟೋಬರ್ 24ಕ್ಕೆ ಬಾಗಿಲು ತೆರೆಯಲಾಗಿದ್ದು ನವೆಂಬರ್ 3ಕ್ಕೆಬಾಗಿಲು ಮುಚ್ಚಲಿದೆ. ಒಟ್ಟು 11 ದಿನಗಳು ಹಾಸನಾಂಬೆ ದೇಗುಲದ ಬಾಗಿಲು ತೆರೆದಿರಲಿದ್ದು ಭಕ್ತರಿಗೆ ಮೊದಲ ಹಾಗು ಕೊನೆಯ ದಿನ ಹೊರತು ಪಡಿಸಿ ಉಳಿದ 9 ದಿನಗಳು ದೇವಿ ದರ್ಶನಕ್ಕೆ ಮುಕ್ತ ಅವಕಾಶ ಸಿಗಲಿದೆ.
ಪವಾಡಗಳೂ ಕೂಡ ಹಾಸನಾಂಬೆಯ ಮಹಿಮೆಯನ್ನು ಹೆಚ್ಚಿಸಿದೆ. ಬಲಿಪಾಡ್ಯಮಿಯ ಮಾರನೇ ದಿನ ಪೂಜೆ ಸಲ್ಲಿಸಿ ದೀಪ ಹಚ್ಚಿ ಬಾಗಿಲು ಮುಚ್ಚಿದರೆ, ಮತ್ತೆ ದೇಗುಲ ತೆರೆಯುವುದು ವರ್ಷದ ಬಳಿಕ. ಆದರೆ, ವರ್ಷದ ಬಳಿಕ ಬಾಗಿಲು ತೆರೆದರೂ ಹಿಂದಿನ ವರ್ಷ ಹಚ್ಚಿಟ್ಟ ದೀಪ ಆರಿರುವುದಿಲ್ಲ. ದೇವರ ಮುಡಿಗಿಟ್ಟ ಹೂ ಬಾಡಿರುವುದಿಲ್ಲ. ಇದನ್ನು ಕಂಡ ಅದೆಷ್ಟೋ ಭಕ್ತರು ದೇವಿಯ ಮಹಿಮೆಯನ್ನು ಕೊಂಡಾಡಿದ್ದಾರೆ. ಶಕ್ತಿದೇವತೆ ಹಾಸನಾಂಬೆ ನಮ್ಮ ಕಷ್ಟ ನಿವಾರಿಸುತ್ತಾಳೆ ಎಂಬ ನಂಬಿಕೆಯಿಂದಲೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ನಮಿಸಿ ಪೂಜಿಸುತ್ತಾರೆ.
ಈ ವರ್ಷ ಒಟ್ಟು 11 ದಿನಗಳ ಕಾಲ ಶಕ್ತಿದೇವತೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಮೊದಲ ಹಾಗೂ ಕೊನೆಯ ದಿನ ಮಾತ್ರ ಹೊರತುಪಡಿಸಿ ಉಳಿದ 9 ದಿನಗಳು ದಿನದ 24 ಗಂಟೆಗಯೂ ಭಕ್ತರಿಗೆ ಹಾಸನಾಂವೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮಧ್ಯಾಹ್ನದ ಅವಧಿ ಹಾಗೂ ಮುಂಜಾನೆ ವೇಳೆ ನೈವೇದ್ಯಕ್ಕಾಗಿ, ಪೂಜೆ ವೇಳೆ ಒಂದು ಗಂಟೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.











Click it and Unblock the Notifications