Hasanamba 2023: ಹಾಸನಾಂಬಾ ದೇಗುಲ ಓಪನ್: ಇಂದು ಭಕ್ತರಿಗಿಲ್ಲ ದರ್ಶನ ಭಾಗ್ಯ
ಹಾಸನ, ನವೆಂಬರ್ 02: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲು ಇಂದು ತೆರೆದಿದೆ. ಜಿಲ್ಲಾಡಳಿತ ಹಾಗೂ ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಒಂದು ವರ್ಷದ ಬಳಿಕ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಿದ್ದಾಳೆ.
ಇಂದಿನಿಂದ ನವೆಂಬರ್ 15ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, 14 ದಿನಗಳ ಕಾಲ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ ಪೂಜಾ ವಿಧಿ-ವಿಧಾನಗಳಿರುವುದರಿಂದ ಇಂದು ಮತ್ತು ನವೆಂಬರ್ 15 ರಂದು ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ನಾಳೆ ಬೆಳಗ್ಗೆ ಆರು ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ದರ್ಶನೋತ್ಸವ ಹಿನ್ನಲೆಯಲ್ಲಿ ಹಾಸನಾಂಬೆ ಸಿದ್ದೇಶ್ವರ ದೇವಾಲಯಗಳು ಅದ್ಧೂರಿಯಾಗಿ ಸಿಂಗಾರಗೊಂಡಿದೆ. ಇನ್ನು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದ್ದು, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರ, ಆಹ್ವಾನ ಪತ್ರಿಕೆ, ವಿಐಪಿ ಹಾಗೂ ವಿವಿಐಪಿ ಪಾಸ್ ವಿತರಣೆ, ಭಕ್ತಾಧಿಗಳು ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಲಾಡು ಪ್ರಸಾದ, ದೊನ್ನೆ ಪ್ರಸಾದ ವಿತರಣೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಇನ್ನು ಕಳೆದ ವರ್ಷ ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರವರೆಗೆ ದೇಗುಲ ಬಾಗಿಲು ತೆರೆದಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನ ಜಿಲ್ಲಾಡಳಿತ ದೇವಿಯ ದರ್ಶನದ ಅವಧಿ ವಿಸ್ತರಣೆ ಮಾಡಲಾಗಿತ್ತು, ಪ್ರತಿ ದಿನ 30 ರಿಂದ 50 ಸಾವಿರ ಭಕ್ತರಂತೆ ಸುಮಾರು ಆರು ಲಕ್ಷಕ್ಕೂ ಅಧಿಕ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದರು. ಆದರೆ ಈ ಬಾರಿ ಶಕ್ತಿ ಯೋಜನೆ ಅಡಿಯಲ್ಲಿ ಇನ್ನಷ್ಟು ಹೆಚ್ಚು ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆ ಇದೆ.











Click it and Unblock the Notifications