Hasanamba Temple: ಹಾಸನಾಂಬೆ ದರ್ಶನ ಪಡೆದ ಸಿಎಂ, ಹಾಸನಕ್ಕೆ ಸಿಹಿಸುದ್ದಿ ಕೊಟ್ಟ ಸರ್ಕಾರ!
ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ಹಾಸನಾಂಬ ದೇವಿಯ ಜಾತ್ರೆಯಲ್ಲೂ ಸಿಎಂ ಭಾಗಿಯಾದರು. ಜಾತ್ರೆಯ ಅಂಗವಾಗಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡ ಹಾಸನದ ಸೊಬಗನ್ನು ಕಣ್ತುಂಬಿಕೊಂಡೆ. ತಾಯಿ ಹಾಸನಾಂಬೆಯ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿದ್ದು, ಎಲ್ಲ ಜಲಾಶಯಗಳು ತುಂಬಿವೆ. ಜಲಾಶಯಗಳಲ್ಲಿ ಶೇ 90ರಷ್ಟು ನೀರು ತುಂಬಿದೆ. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಾಗ, ಬಡವರ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. 2023ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ, ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ಜಾತಿ, ಧರ್ಮದ, ಭಾಷೆಯ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಶಾಸಕರು, ಸಚಿವರ ಪ್ರಯತ್ನ ನಿರಂತರವಾಗಿ ಇರುತ್ತದೆ ಎಂದರು.
ಹಾಸನ ಇನ್ನು ಮಹಾನಗರ ಪಾಲಿಕೆ
ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದು ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದರು. ಹೇಮಾವತಿ ಜಲಾಶಯದ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಹಾಸನ ವಿಮಾನ ನಿಲ್ದಾಣ ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಹಾಸನ ಜಿಲ್ಲೆಯ ಹೆಚ್ಚಿನ ಅಭಿವೃದ್ಧಿಗಾಗಿ ಅವಶ್ಯಕ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸಲ್ಲಿಸಿದರೆ, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಕ್ಕೆ ಬಂದ ಎಂಟು ತಿಂಗಳೊಳಗಾಗಿ ಗ್ಯಾರಂಟಿಗಳನ್ನು ಜಾರಿ ಮಾಡಲಾಯಿತು. ಈ ಯೋಜನೆಗಳಿಂದ ಖಜಾನೆ ಖಾಲಿಯಾಗುತ್ತದೆ, ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಆ ಎಲ್ಲ ಟೀಕೆಗಳನ್ನು ಮೆಟ್ಟಿ ನಿಂತು, ಗ್ಯಾರಂಟಿಗಳನ್ನು ಜಾರಿ ಮಾಡಿ, ಬಡವರಿಗೆ ಶಕ್ತಿ ತುಂಬಲಾಗಿದೆ. ಬಡವರು ಖುಷಿಯಾಗಿದ್ದು, ಸಮಾಧಾನದಿಂದ ಇದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಸಮಾಧಾನವಾದಂತಿಲ್ಲ. ನಮ್ಮ ಸರ್ಕಾರ ಬಡವರ ಪರವಾಗಿ, ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದು, ಸಾಮಾಜಿಕ ನ್ಯಾಯ ಹಾಗೂ ಬಡವರ ಪರವಾಗಿಲ್ಲದವರಿಗೆ ಇದರಿಂದ ಸಮಾಧಾನವಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾನು ಎರಡನೇ ಬಾರಿಗೆ ಹಾಸನಾಂಬ ದೇವಿ, ಸಿದ್ದೇಶ್ವರಸ್ವಾಮಿ, ಗಣಪತಿ ದೇವರ ದರ್ಶನವನ್ನು ಪಡೆದು, ರಾಜ್ಯದ ಎಲ್ಲ ಜನತೆಗೆ ಸನ್ಮಂಗಳ ಉಂಟು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ನಾವು ಮನುಜರಾಗಿ ಪರಸ್ಪರ ದ್ವೇಷ ಇರಬಾರದು. ಸಮಾಜದಲ್ಲಿ ದ್ವೇಷವನ್ನು ಬಿತ್ತುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಶಾಸ್ತಿ ಮಾಡುವಂತೆ ದೇವರನ್ನು ಕೋರಿದ್ದೇನೆ. ಈ ಬಾರಿ ದಸರಾ ಉತ್ಸವದಂತೆ ಹಾಸನಾಂಬ ಜಾತ್ರೆಯನ್ನೂ ಅದ್ದೂರಿಯಾಗಿ ಆಯೋಜಿಸಲಾಗಿದೆ. ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದು ಕರೆ ನೀಡಿದರು.











Click it and Unblock the Notifications