ಹಾಸನಾಂಬ ಜಾತ್ರೆ; 13 ದಿನ ದೇವಿಯ ದರ್ಶನಕ್ಕೆ ಅವಕಾಶ
ಹಾಸನ, ಅಕ್ಟೋಬರ್ 15 : ಇತಿಹಾಸ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಈ ವರ್ಷ ಒಟ್ಟು 13 ದಿನಗಳ ಕಾಲ ದೇವಿಯ ದರ್ಶನ ಪಡೆಯಲು ಅವಕಾಶ ಸಿಕ್ಕಿದೆ.
ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ.
ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಈ ವರ್ಷ ಅಕ್ಟೋಬರ್ 17ರಂದು ಬಾಗಿಲು ತೆರೆಯಲಾಗುತ್ತಿದ್ದು, ಅಕ್ಟೋಬರ್ 29ರಂದು ಬಾಗಿಲು ಮುಚ್ಚಲಾಗಿತ್ತದೆ. ರಾತ್ರಿ 11 ಗಂಟೆಯ ತನಕ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಭಕ್ತರಿಗೆ ಹಾಸನಾಂಬ ದೇವಾಲಯದ ಜಾತ್ರೆಯ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ವೆಬ್‌ಸೈಟ್ ಆರಂಭಿಸಲಾಗಿದೆ. 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ ಮುಂತಾದ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಎರಡು ದಿನ ದರ್ಶನಕ್ಕೆ ವ್ಯವಸ್ಥೆ ಇಲ್ಲ
ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆ ನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಈ ಎರಡು ದಿನ ಹೊರತುಪಡಿಸಿ ಉಳಿದ ದಿನ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶವಿದೆ.

ದೇವಿಯ ಆಭರಣ ಹಸ್ತಾಂತರ
ಹಾಸನಾಂಬ ಜಾತ್ರೆಯ ಪ್ರಯುಕ್ತ ಹಾಸನಾಂಬ ದೇವಿಯ ಒಡವೆಗಳನ್ನು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಆರ್.ಗಿರೀಶ್ ದೇವಾಲಯದ ಅರ್ಚಕರಿಗೆ ಹಸ್ತಾಂತರ ಮಾಡಿದರು. ಪೂಜೆ ನೆರವೇರಿಸಿದ ನಂತರ ಜಿಲ್ಲಾ ನ್ಯಾಯಾಲಯದ ಆವರಣದ ಮೂಲಕ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಆಭರಣಗಳನ್ನು ತೆಗೆದುಕೊಂಡು ಹೋಗಲಾಯಿತು.

ದೇವಾಲಯದ ವೆಬ್ ಸೈಟ್
ಹಾಸನಾಂಬ ಜಾತ್ರೆಯ ಪ್ರಯುಕ್ತ ಭಕ್ತಾಧಿಗಳಿಗೆ ಅನುಕೂಲವಾಗಲು ಶ್ರೀ ಹಾಸನಾಂಬ ಡಾಟ್ ಕಾಮ್ ಎಂಬ ವೆಬ್ ಸೈಟ್ ಆರಂಭಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ವಿವರಗಳು ಲಭ್ಯವಿದೆ. ದೇವಾಲಯದ ಇತಿಹಾಸ, ಹಾಸನಾಂಬ ದೇವಿ ದರ್ಶನದ ಟಿಕೆಟ್ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ ಸೇರಿದಂತೆ ವಿವಿಧ ಮಾಹಿತಿ ಲಭ್ಯವಿದೆ.

ಭಕ್ತರಿಗಾಗಿ ಹಲವು ಸೌಲಭ್ಯ
ಮಳೆಯಾಗುವ ಸಾಧ್ಯತೆ ಇರುವುದರಿಂದ ಹಾಸನಾಂಬ ದೇವಿ ದರ್ಶನಕ್ಕೆ ಬರುವ ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಲ್ಲಲು ವಾಟರ್ ಫ್ರೂಫ್ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ದೇವಾಲಯದ ಸುತ್ತ ಬ್ಯಾರಿಕೇಡ್ ಹಾಕಬೇಕು. ಮುಖ್ಯ ರಸ್ತೆಗಳಲ್ಲಿರುವ ಗುಂಡಿ ಮುಚ್ಚಬೇಕು, ಮೂಲ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.












Click it and Unblock the Notifications