ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ತಲ್ವಾರ್‌ನಿಂದ ಗ್ಲಾಸ್ ಹೊಡೆದ ಕಿಡಿಗೇಡಿ
ಹಾಸನ: ಹೆದ್ದಾರಿಗಳಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಕಿಡಿಗೇಡಿಯೊಬ್ಬ ನಿನ್ನೆ (ಜನವರಿ 29) ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಕಾರಿನಲ್ಲಿ ಬಂದು ಪ್ರಯಾಣಿಕರಿದ್ದ ಬಸ್ಸನ್ನು ಅಡ್ಡಗಟ್ಟಿದ್ದಾನೆ. ಬಳಿಕ ಲಾಂಗ್‌ನಿಂದ ಬಸ್ ಗ್ಲಾಸ್ ಅನ್ನು ತಲ್ವಾರ್‌ನಿಂದ ಹೊಡೆದ ಘಟನೆ ಹಾಸನದ ದೇವರಾಯಪಟ್ಟಣ ಬಳಿಯ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಕಿಡಿಗೇಡಿಯೊಬ್ಬ ಸುಗಮ ಟ್ರಾವೆಲ್ಸ್‌ಗೆ ಸೇರಿದ ಬಸ್ಸಿಗೆ ಅಡ್ಡಗಟ್ಟಿ ಹಲ್ಲೆ ನಡೆಸಿ ಪ್ರಯಾಣಿಕರಿಗೆ ಭಯ ಉಂಟುಮಾಡಿದ ಘಟನೆ ಹಾಸನದ ಬೈಪಾಸ್ ಬಳಿ ರಾತ್ರಿ 2 ಗಂಟೆಗೆ ನಡೆದಿದೆ. ಯಾಕಪ್ಪಾ ಹೀಗೆ ಲಾಂಗ್ ಹಿಡಿದುಕೊಂಡಿದ್ದೀಯಾ ಅಂತಾ ಬಸ್ ಚಾಲಕ ಕೇಳಿದ ಕೂಡಲೇ ಆ ಪುಡಿರೌಡಿ ಏಕಾಏಕಿ ಬಸ್ ಗ್ಲಾಸ್‌ಗೆ ತನ್ನ ಕಾರ್‌ನಲ್ಲಿದ್ದ ತಲ್ವಾರ್ ತೆಗೆದು ಪುಡಿ ಪುಡಿಯಾಗುವಂತೆ ಹೊಡೆದಿದ್ದಾನೆ.

ಈ ದೃಶ್ಯ ಕಂಡ ಪ್ರಯಾಣಿಕರು ಗಾಭರಿಗೊಂಡಿದ್ದು, ಇನ್ನು ಕೆಲವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇದು ಇದೀಗ ಭಾರೀ ವೈರಲ್ ಆಗುತ್ತಿದೆ. ಈ ದೃಶ್ಯದಲ್ಲಿ ಪುಡಿರೌಡಿ ತಲ್ವಾರ್‌ನಿಂದ ಹಲ್ಲೆ ನಡೆಸಿ ಪ್ರಯಾಣಿಕರೆಲ್ಲ ಚೀರಾಡುತ್ತಿದ್ದಂತೆ ಪರಾರಿಯಾಗಿದ್ದಾನೆ. KA-51-MV-8912 ನಂಬರ್ ಕಾರಿನಲ್ಲಿ ಬಂದು ರೌಡಿಸಂ ಮಾಡಿ ಎಸ್ಕೇಪ್ ಆಗಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ರಾಜ್ಯ ಗೃಹ ಇಲಾಖೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೀಗೆ ಇದ್ದಕಿದ್ದಂತೆ ಬಂದು ಹೀಗೆ ಹಲ್ಲೆ ಮಾಡಿದರೆ ಏನು ಅರ್ಥ? ಸಾಮಾನ್ಯ ಜನರು ಬದುಕುವುದಾದರೂ ಹೇಗೆ? ಗೃಹ ಸಚಿವರೇ ಎಲ್ಲಿದೆ ಕಾನೂನು ಸುವ್ಯವಸ್ಥೆ? ರೌಡಿಗಳ ಅಟ್ಟಹಾಸಕ್ಕೆ ಕೊನೆಯೇ ಇಲ್ವಾ? ಎಂದೆಲ್ಲಾ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನಡುರಸ್ತೆಗಳಲ್ಲಿಯೇ ಹಲ್ಲೆಗಳು ನಡೆಯುತ್ತಿವೆ. ಸಾಮಾನ್ಯ ಜನರು ಓಡಾಡುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬಾಲಕ ಆತ್ಮಹತ್ಯೆ: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಮೊಬೈಲ್ ಫೋನ್‌ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇನ್ನು ಪೋಷಕರು ಮನೆಗಳಲ್ಲಿ ಫೋನ್ ಕೊಡಿಸದಿದ್ದರೆ ಕೆಲ ಮಕ್ಕಳು ಎಂತಹ ಮಟ್ಟಕ್ಕಾದರೂ ಇಳಿದುಬಿಡುತ್ತಾರೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಮೊಬೈಲ್ ಚಟಕ್ಕೆ ಬಿದ್ದು 13 ವರ್ಷದ ಬಾಲಕನೋರ್ವ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ.
ಧ್ರುವ (13) ಆತ್ಮಹತ್ಯೆಗೆ ಶರಣಾದ ಬಾಲಕ. ಈ ಬಾಲಕ 9 ವರ್ಷದ ತಂಗಿಯ ಮುಂದೆಯೇ ಉಡದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದೆ, ತಂಗಿ ಸುಮ್ಮನೆ ನೋಡುತ್ತಿದ್ದಳು ಎಂದು ತಿಳಿದುಬಂದಿದೆ.
ಧ್ರುವ ಮನೆಯವರ ಮಾತು ಕೇಳದೆ ಅತೀಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳವಾರ ಪೋಷಕರು ಕೆಲಸಕ್ಕೆ ತೆರಳಿದ್ದರು. ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿ ಇದ್ದರು. ಆಗ ಬಾಲಕ ಪ್ಯಾಂಟ್ ತೆಗೆದು ಸೊಂಟದ ಉಡದಾರವನ್ನಯ ಫ್ಯಾನ್‌ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಂಜೆ 7 ಗಂಟೆ ಸುಮಾರಿಗೆ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಉಡದಾರ ಕುತ್ತಿಗೆಗೆ ಬಿಗಿದು, ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಬಾಲಕ ಕೆಳಗೆ ಬಿದ್ದ ವೇಳೆ ಕೆಲಸ ಮುಗಿಸಿ ತಾಯಿ ಬಂದಿದ್ದಾರೆ. ಘಟನೆ ನೋಡಿ ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications