Waterfall: ಭಾರಿ ಮಳೆಗೆ ಏಕಾಏಕಿ ಸೃಷ್ಟಿಯಾಯ್ತು ಮನಮೋಹಕ ಜಲಪಾತ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದ್ದು, ನದಿಗಳ ಹರಿವು ಜೋರಾಗಿದೆ. ಗದಗ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು ತಾತ್ಕಾಲಿಕ ಪ್ರಸಿದ್ಧ ಬೆಟ್ಟದಲ್ಲಿ ಜಲಪಾತವನ್ನೇ ಸೃಷ್ಟಿಮಾಡಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಬೆಟ್ಟದಲ್ಲಿ ಭಾರಿ ಮಳೆಯಿಂದಾಗಿ ಜಲಪಾತ ಸೃಷ್ಟಿಯಾಗಿದ್ದು ಮನಮೋಹಕವಾಗಿ ಕಾಣಿಸುತ್ತಿದೆ. ವೀರಯ್ಯ ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಭಾರಿ ಮಳೆಯಿಂದಾಗಿ ತಾತ್ಕಾಲಿಕ ಜಲಪಾತ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಗಜೇಂದ್ರಗಡ ಗಿರಿಧಾಮ, ಕೋಟೆಗಳು, ದೇವಸ್ಥಾನ, ಕೈಮಗ್ಗಗಳಿಗೆ ಹೆಸರಾಗಿದೆ. ಗದಗ ಜಿಲ್ಲಾ ಕೇಂದ್ರದಿಂದ ಈ ನಗರ 200 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ 450 ಕಿಲೋಮೀಟರ್ ದೂರದಲ್ಲಿದೆ.
ನಿನ್ನೆ ಆದ ದೊಡ್ಡ ಮಳೆಗೆ 🌧️🌧️ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕು ಶ್ರೀ ಕಾಲಕಾಲೇಶ್ವರ ಬೆಟ್ಟದಲ್ಲಿ ತಾತ್ಕಾಲಿಕ ಜಲಪಾತ ಸೃಷ್ಟಿ.#Karnataka #NorthKarnataka #monsoon #heavyrain #Gajendragada #Gadag #Waterfalls@KarnatakaSNDMC pic.twitter.com/CHAwkBibC5
— Mr. V (@Veerayya_S_S) June 14, 2024
ವ್ಯಾಪಕ ಮಳೆ ಮುನ್ಸೂಚನೆ
ಇನ್ನೂ ಐದು ದಿನ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಮಳೆ ಮುಂದುವರೆದಂತೆ ಜಲಪಾತ ಮತ್ತಷ್ಟು ಭೋರ್ಗರೆಯುವ ಸಾಧ್ಯತೆ ಇದೆ. ಮಳೆ ಸತತವಾಗಿ ಬಂದರೆ ಜಲಪಾತ ಕೂಡ ಸುರಿಯುತ್ತಿರುತ್ತದೆ, ಇಲ್ಲವಾದಲ್ಲಿ ಜಲಪಾತ ಕಣ್ಮರೆಯಾಗಲಿದೆ.
ಜಲಾಶಯಗಳಿಗೆ ನೀರು
ಮಹಾರಾಷ್ಟ್ರದ, ಕೃಷ್ಣ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಬಳ್ಳಾರಿ, ವಿಜಯನಗರ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಇದ್ದು, ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಆಲಮಟ್ಟಿ ಜಲಾಶಯಕ್ಕೆ ಸದ್ಯ ಒಳಹರಿವು 9122 ಕ್ಯೂಸೆಕ್ಸ್ ಇದ್ದು, 430 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯದ ಒಳಹರಿವು 3737 ಕ್ಯೂಸೆಕ್ಸ್ ಇದ್ದು, 36 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ಪ್ರಸಿದ್ಧ ಕಾಲಕಾಲೇಶ್ವರ ದೇವಸ್ಥಾನ
ಯಾತ್ರಿಕ ಕಾಲಕಾಲೇಶ್ವರ ದೇವಾಲಯ ಒಂದು ದೊಡ್ಡ ಪರ್ವತವಾಗಿದ್ದು, ದೇವಾಲಯವನ್ನು ಕೆತ್ತಲಾಗಿದೆ. ವಾರಾಂತ್ಯದಲ್ಲಿ ಭೇಟಿ ನೀಡಲು ಇದು ಒಂದು ಸುಂದರ ಸ್ಥಳವಾಗಿದೆ. ದೇವಸ್ಥಾನವಿರುವ ಬೆಟ್ಟದ ಎದುರಿನ ಬೆಟ್ಟದ ಮೇಲೆ ಸಾಲಾಗಿರುವ ಗಾಳಿಯಂತ್ರಗಳ ದೃಶ್ಯ ಕೂಡ ಸುಂದರವಾಗಿರುತ್ತದೆ.
ಸೂಡಿಯ ಮಲ್ಲಿಕಾರ್ಜುನ ದೇವಾಲಯ, ಅವಳಿ ಗೋಪುರದ ದೇವಾಲಯ, ಕಲ್ಲಿನಲ್ಲಿ ನಿರ್ಮಿಸಿದ ಈಶ್ವರ ಮತ್ತು ನಾಗಕುಂಡ ಪ್ರಮುಖ ಆಕರ್ಷಣೆಗಳಾಗಿವೆ. ಗಜೇಂದ್ರಗಡದಿಂದ ಸುಮಾರು 13 ಕಿಮೀ ದೂರದಲ್ಲಿರುವ ಭೀಮಾಂಬಿಕಾ ದೇವಸ್ಥಾನವಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಮಹಾಕೂಟ ಕೂಡ ಗಜೇಂದ್ರಗಡಕ್ಕೆ ಹತ್ತಿರದಲ್ಲೇ ಇದ್ದು ನೋಡಬಹುದಾಗಿದೆ.












Click it and Unblock the Notifications