ಪಿಯುನಲ್ಲಿ ರಾಜ್ಯಕ್ಕೆ ದ್ವಿತೀಯ, ಫಲಿತಾಂಶ ಬಂದಾಗ ಕೂಲಿ ಮಾಡುತ್ತಿದ್ದ!
ಗದಗ, ಜೂನ್ 19: ಗದಗ ಜಿಲ್ಲೆಯ ರೋಣ ತಾಲೂಕಿನ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಶಿವರಾಜ್. ಡಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿದ್ದಾನೆ.
ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನಗಳಿಸಿದ್ದಾನೆ. ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಶಿವರಾಜ್ 100ಕ್ಕೆ 100 ಅಂಕ ಪಡೆದಿದ್ದಾನೆ. ಕನ್ನಡ 98, ಇಂಗ್ಲೀಷ್ 95 ಅಂಕ ಪಡೆದು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ್ದಾನೆ.
ರಾಯಚೂರು ಮೂಲದ ಶಿವರಾಜ್ ಪಿಯು ವ್ಯಾಸಂಗಕ್ಕೆ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜು ಸೇರಿಕೊಂಡಿದ್ದರು. ಸೋದರ ಮಾವ ಲಿಂಗಪ್ಪ ಸೂಚನೆಯಂತೆ ನೆರೇಗಲ್ ಸೇರಿದ್ದ ಶಿವರಾಜ್ ಶ್ರದ್ಧೆಯಿಂದ ಕಲಿಯುತ್ತಿದ್ದರು. ಲಿಂಗಸಗೂರು ತಾಲೂಕಿನ ಯರಗಟ್ಟ ಗ್ರಾಮದಲ್ಲಿ ತಂದೆ ತಾಯಿ ಕೂಲ ಕೆಲಸ ಮಾಡಿಕೊಂಡು ಜೀವನ ನಡೆಸಿದರೆ, ಓದಿನಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಹೊಂದಿರುವ ಶಿವರಾಜ್ ನೆರೇಗಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕೂಲಿ ಕೆಲಸಕ್ಕೆ ಸೇರಿದ ಶಿವರಾಜ್; ಶಿವರಾಜ್ ಮೂಲ ರಾಯಚೂರು. ಕಾಲೇಜು ಅಭ್ಯಾಸ ಮಾಡುತ್ತಿದ್ದ ಊರು ನೆರೇಗಲ್. ಆದರೆ ಸದ್ಯ ಶಿವರಾಜ್ ಕೂಲಿ ಕೆಲಸಕ್ಕೆ ತುಮಕೂರು ಸೇರಿದ್ದಾರೆ. 7ನೇ ಕ್ಲಾಸ್ ಇದ್ದಾಗಿನಿಂದಲೂ ಶಿವರಾಜ್ ದುಡಿಯುತ್ತಲೇ ಓದುತ್ತಿದ್ದಾರೆ. ತಿಂಗಳು ರಜೆಯಲ್ಲಿ ಕೆಲಸ ಮಾಡಿ ಉಳಿದ ಹಣವನ್ನೇ ವಿದ್ಯಾಭ್ಯಾಸಕ್ಕೆ ಶಿವರಾಜ್ ಬಳಸುತ್ತಾರೆ. ಪಿಯು ಫಲಿತಾಂಶ ಬಂದಾಗ ಶಿವರಾಜ್ ತುಮಕೂರಿನಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದರು.
rank ಬಂದಿರೋ ವಿಚಾರ ಶಿವರಾಜ್‌ಗೆ ಫೋನ್ ಮೂಲಕ ತಿಳಿದಿದೆ. ಸಹ ಕೆಲಸಗಾರರಿಗೂ ವಿಷಯ ತಿಳಿದಿದೆ. ಸ್ಥಳಕ್ಕೆ ಕೇಕ್ ತರೆಸಿದ ಮೇಸ್ತ್ರಿಗಳು ಶಿವರಾಜ್ ಸಾಧನೆಯನ್ನ ಸಂಭ್ರಮಿಸಿದ್ದಾರೆ.
ಐಎಎಸ್ ಪರೀಕ್ಷೆ ಪಾಸ್ ಮಾಡಬೇಕು ಅಂತಾ ಕನಸು ಕಾಣಿತ್ತಿರುವ ಶಿವರಾಜ್ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಐವರು ಸಹೋದರರು, ಮೂವರು ಸಹೋದರಿಯರ ಪೈಕಿ ಶಿವರಾಜ್ ಮೂರನೇಯವರು. ಅಣ್ಣ ಗಾರೆ ಕೆಲಸ ಮಾಡುತ್ತಾರೆ. ತಂದೆ-ತಾಯಿ ಕೂಲಿ ಮಾಡುತ್ತಾರೆ. ಮೂರು ಎಕರೆ ಜಮೀನು ನಂಬಿಕೊಂಡು ಜೀವನ ನಡೆಯುತ್ತಿದೆ. ಯಾರಿಗೂ ಹೊರೆಯಾಗದೇ ಶಿಕ್ಷಣ ಪಡೆಯಬೇಕು ಎನ್ನುವುದು ಶಿವರಾಜ್ ಛಲವಾಗಿದೆ.

ಗದಗ ಜಿಲ್ಲೆಯ ಫಲಿತಾಂಶ; 2021- 22ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಗದಗ ಜಿಲ್ಲೆ ಶೇ 60.63 ಫಲಿತಾಂಶ ದಾಖಲಿಸಿದೆ. ನರೇಗಲ್ ನ ಅನ್ನದಾನೇಶ್ವರ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಶಿವರಾಜ ದುರ್ಗಪ್ಪ 593 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮುಂಡರಗಿಯ ಜೆ.ಎ.ಪಿಯು ಕಾಲೇಜಿನ ನಿಂಜಪ್ಪ ಹು.ಮುರಡಿ (588) ದ್ವಿತೀಯ ಸ್ಥಾನ, ಗದುಗಿನ ಎಚ್‌ಸಿಎಸ್ ಪಿಯು ಕಾಲೇಜಿನ ಗೋಪಾಲಕೃಷ್ಣ ಪಡಸಲಮನಿ (585), ಮುಂಡರಗಿಯ ಜೆ.ಎ.ಪಿಯು ಕಾಲೇಜಿನ ವಿಜಯ ಚನ್ನಪ್ಪ (585) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಗದುಗಿನ ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಅದಿತಿ ನಾಗರಾಜ (588) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗದುಗಿನ ಎಎಸ್ಎಸ್ ಪಿಯು ಕಾಲೇಜಿನ ಆಕಾಶ್ ಆರ್.ಮಾಲಾಪುರ (585) ದ್ವಿತೀಯ, ನರೇಗಲ್ ಅನ್ನದಾನೇಶ್ವರ ಪಿಯು ಕಾಲೇಜಿನ ಮೃತ್ಯುಂಜ ಪಿ.ಹಿರೇಮಠ (584) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗದಗ ಸರ್ಕಾರಿ ಪಿಯು ಕಾಲೇಜಿನ ರಾಹುಲ್ ದೀಪಕ್ ಹೆಬ್ಬಾರೆ (591), ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಮುಸ್ಕಾನ ಮೆಹಬೂಬ ಮೊಮಿನ (589) ದ್ವಿತೀಯ, ಅಡವಿಸೋಮಾಪುರದ ಬಿಪಿನ್ ಚಿಕ್ಕಟ್ಟಿ ಪಿಯು ಕಾಲೇಜಿನ ಬಸವರಾಜ ಪ.ಸೊನ್ನದ (584) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
"ಗದಗ ಜಿಲ್ಲೆ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಶೇ 100ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಎಲ್ಲ ಪರೀಕ್ಷೆಗಳು ನಡೆದಿದ್ದು, ಜಿಲ್ಲೆಗೆ ಶೇ 60.63 ಫಲಿತಾಂಶ ಲಭಿಸಿದೆ" ಎಂದು ಗದಗ ಜಿಲ್ಲಾ ಡಿಡಿಪಿಯು ಕಾಂಬಳೆ ತಿಳಿಸಿದ್ದಾರೆ.












Click it and Unblock the Notifications