ಪಿಎಫ್‌ಐ ಸಂಘಟನೆಯೊಂದಿಗೆ ಸಂಪರ್ಕ: ಗದಗದಲ್ಲಿ ಇಬ್ಬರ ಬಂಧನ
ಗದಗ, ಸೆಪ್ಟೆಂಬರ್, 27: ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೊಂದಿಗೆ ನಂಟು ಇಟ್ಟುಕೊಂಡು ಆರೋಪದ ಮೇಲೆ ಗದಗದಲ್ಲಿ ಇಬ್ಬರು ಯುವಕರ ಶಹರ ಪೊಲೀಸರು ಬಂಧಿಸಿದ್ದಾರೆ.
ರಹೆಮತ್ ನಗರದ ರುಸ್ತುಂ ಗೌಂಡಿ, ಕಾಗದಗಾರ ಓಣಿಯ ಸರ್ಫರಾಜ್ ದಂಡೀನ್ ನನ್ನು ಬಂಧಿಸಿದ್ದಾರೆ. ಬೆಟಗೇರಿಯ ಸನಾಉಲ್ಲಾ ಶಲವಡಿ ಎಂಬುವನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಸರ್ಫರಾಜ್ ಮೆಕ್ಯಾನಿಕ್ ಕಾರ್ಮಿಕನಾಗಿದ್ದು, ರುಸ್ತುಂ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಜೊತೆಗೆ ಸನಾಉಲ್ಲಾ ಜೆಸಿಬಿ ಕೆಲಸ ಮಾಡುತ್ತಿದ್ದ. ಮೂವರು ಪಿಎಫ್‌ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದು, ಜಿಲ್ಲಾದ್ಯಂತ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡವರು ಎನ್ನಲಾಗಿದೆ.
ಹುಬ್ಬಳ್ಳಿ ಪ್ರತಿಭಟನೆಯಲ್ಲಿ ಭಾಗಿ ಶಂಕೆ
ಸೆಪ್ಟೆಂಬರ್ 22ರಂದು ರಾಷ್ಟ್ರಿಯ ತನಿಖಾ ದಳ ದೇಶದಾದ್ಯಂತ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ತನಿಖೆ ನಡೆಸಿತ್ತು. ದಾಳಿಯನ್ನ ಖಂಡಿಸಿ ಪಿಎಫ್‌ಐ ಸಂಘಟನೆಯವರು ಹುಬ್ಬಳ್ಳಿ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಧರಣಿ ನಡೆಸಿದ್ದರು. ಧರಣಿಗೆ ಗದಗದಿಂದ ಜನರನ್ನು ಕರೆದುಕೊಂಡು ಹೋಗುವುದಲ್ಲೆದೇ, ಮತ್ತೆ ಕೆಲವರನ್ನು ಸಂಪರ್ಕಿಸುವ ಕೆಲಸವನ್ನು ಮೂವರು ಆರೋಪಿಗಳು ಮಾಡಿದ್ದರು ಎನ್ನಲಾಗಿದೆ. ದಾಳಿ ಸಂಬಂಧ ವಿಷಯಗಳನ್ನು ಸಂಘಟನೆಗೆ ತಲುಪಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆ ಬಳಿಕ ಹೊರಬಿದ್ದಿದೆ.

ಬೆಳಂ ಬೆಳಗ್ಗೆ ಮೂವರು ಪೊಲೀಸರ ಬಲೆಗೆ
ರಾತ್ರಿಯಿಂದ ಕಾರ್ಯಚರಣೆ ನಡೆಸಿದ ಪೊಲೀಸರು ಬೆಳಂಬೆಳಗ್ಗೆ ಸರ್ಫರಾಜ್, ರುಸ್ತುಂ, ಸನಾಉಲ್ಲಾರನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಮಲಗಿಕೊಂಡಿದ್ದ ಸರ್ಫರಾಜ್‌ನನ್ನ ಹೊರಗಡೆ ಕರೆಸಿಕೊಂಡು ವಶಕ್ಕೆ ಪಡೆದಿದ್ದಾರೆ ಎಂದು ಕುಟುಂಬಗಳು ಆರೋಪಿಸಿವೆ. ಈ ಬಗ್ಗೆ ಮಾತನಾಡಿದ ಸರ್ಫರಾಜ್ ತಂದೆ ಅಬ್ದುಲ್ ವಹಾಬ್, ಬೆಳಗ್ಗೆ ಮನೆಯಲ್ಲಿದ್ದ 7 ಗಂಟೆ ಸುಮಾರಿಗೆ ಸರ್ಫರಾಜ್ ಕ್ರಿಕೆಟ್ ಆಡುವುದಕ್ಕೆ ಹೊರಗೆ ಹೋಗಿದ್ದಾನೆ ಅದ್ಕೊಂಡಿದ್ದೆವು. ಆದರೆ ಅರೆಸ್ಟ್ ಆಗಿರುವ ಬಗ್ಗೆ ಮಾಧ್ಯಮದವರಿಂದಲೇ ಮಾಹಿತಿ ತಿಳಿದಿದೆ. ನಮ್ಮ ಮಗ ಪಿಎಫ್‌ಐ ಸಂಘಟನೆಯಲ್ಲಿ ಇಲ್ಲ. ಸಮಾಜ ಘಾತುಕ ಕೆಲಸದಲ್ಲಿ ನಮ್ಮ ಮಕ್ಕಳು ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಯುವಕರ ಮೇಲೆ ಪೊಲೀಸ್ ಹದ್ದಿನ ಕಣ್ಣು
ಹುಬ್ಬಳ್ಳಿಯಿಂದ ಆಪರೇಟ್ ಆಗುತ್ತಿರುವ ಸಂಘಟನೆಯನ್ನು ಗದಗದಲ್ಲಿ ಬಲಗೊಳಿಸಲು 25ಕ್ಕೂ ಹೆಚ್ಚು ಯುವಕರು ಮುಂದಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಎರಡು ವರ್ಷದ ಹಿಂದೆ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಈ ಮೂವರು ಆರೋಪಿಗಳು ಗದಗ ಮೂಲದ ಹುಡುಗರನ್ನು ಸಂಘಟಿಸಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆಗಿನಿಂದಲೂ ಸಂಘಟನೆಯ ಯುವಕರ ಮೇಲೆ ಕಣ್ಣಿರಿಸಲಾಗಿತ್ತು. ಗದಗ, ನರಗುಂದಲ್ಲಿ ಇರುವ ಸಂಘಟನೆಯ ಯುವಕರನ್ನು ವಿಚಾರಣೆ ಮಾಡಲಾಗುತ್ತಿದೆ. ಅಮಾಯಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆದ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ. ಅನುಮಾನಾಸ್ಪದ ಚಟುವಟಿಯಲ್ಲಿ ಭಾಗಿಯಾಗಿದ್ದ ಸರ್ಫರಾಜ್, ರುಸ್ತುಂ ಗೌಂಡಿಯನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಸನಾಉಲ್ಲಾ ಎಂಬಾತನ ವಿಚಾರಣೆಯನ್ನು ಮುಂದುವರೆಸಲಾಗಿದೆ.












Click it and Unblock the Notifications