ಗದಗ; ಪಬ್ಜಿ ಆಡಬೇಡ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆ
ಗದಗ, ಅಕ್ಟೋಬರ್ 1: ಆನ್ಲೈನ್ ಕ್ಲಾಸ್ ಎಂದು ಹೇಳಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನಿಗೆ, ಪೋಷಕರು ಬುದ್ಧಿ ಹೇಳಿ ಮೊಬೈಲ್ ಕಸಿದುಕೊಂಡಿದ್ದಕ್ಕೆ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇಂದು ನಡೆದಿದೆ.
ಪಟ್ಟಣದ ಹಿರೆಪೇಟೆ ನಿವಾಸಿ ಕಾರ್ತಿಕ್ ಬುಲಿ (17) ಎಂಬ ಯುವಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದ್ವಿತೀಯ ಪಿಯುಸಿ ಓದುತ್ತಿದ್ದ ಕಾರ್ತಿಕ್, ಯಾವಾಗಲೂ ಪಬ್ಜಿ ಗೇಮ್ ಆಡುತ್ತಿದ್ದ. ಆನ್ಲೈನ್ ಕ್ಲಾಸ್ ಎಂದು ಹೇಳಿಕೊಂಡು ಯಾವಾಗಲೂ ಮೊಬೈಲ್ ಹಿಡಿದು ಆಟ ಆಡುತ್ತಲಿದ್ದ. ಕಾರ್ತಿಕ್ ಈ ರೀತಿ ಆಟ ಆಡುವುದನ್ನು ಗಮನಿಸಿದ ಪೋಷಕರು ಆಟ ಆಡುವುದನ್ನು ಬಿಟ್ಟು ಸರಿಯಾಗಿ ಓದು ಎಂದು ಬೈದು ಬುದ್ಧಿ ಮಾತು ಹೇಳಿ ಆತನಿಂದ ಮೊಬೈಲ್ ಕಸಿದುಕೊಂಡಿದ್ದಾರೆ.
ಆನಂತರ ಕಾರ್ತಿಕ್, ಪೋಷಕರನ್ನು ಮೊಬೈಲ್ ವಾಪಸ್ ಕೊಡುವಂತೆ ಕೇಳಿಕೊಂಡಿದ್ದಾನೆ. ಮೊಬೈಲ್ ಕೊಡದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಹೋಗಿದೆ.

ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆಗೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.












Click it and Unblock the Notifications