ಮಲ್ಲಿಕಾರ್ಜುನ ಖರ್ಗೆ: ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಬುನಾದಿ ಹಾಕಿದ್ದಕ್ಕೇ ಚಹಾ ಮಾರುವವನು ಪ್ರಧಾನಿಯಾಗಿದ್ದು
ಗದಗ, ಏಪ್ರಿಲ್ 26: ಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ನಾವು ಗೆದ್ದರೆ ದೇಶ ಗೆಲ್ಲುತ್ತದೆ. ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿ ರಸ್ತೆ ಮೇಲೆ ಹಾಕಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ 77ರಲ್ಲಿ ಇಂದಿರಾ ಗಾಂಧಿಯನ್ನೂ ಸಹ ಅನರ್ಹಗೊಳಿಸಿದ್ದರು. 1979ರಲ್ಲಿ ಚಿಕ್ಕಮಗಳೂರಿನಿಂದ ಚುನಾವಣೆಯಲ್ಲಿ ಗೆಲ್ಲಿಸಿ, ಇಡೀ ದೇಶದಲ್ಲಿ 1989ರಲ್ಲಿ ಸಂಪೂರ್ಣ ಬಹುಮತ ಬಂತು. ಅದೇ ರೀತಿ 2024ರಲ್ಲಿ ಕಾಂಗ್ರೆಸ್‌ಗೆ ಭಾರೀ ಬಹುಮತ ಬಂದು ಬಿಜೆಪಿ ಸೋಲುತ್ತೆ ಎಂದರು.

ಕರ್ನಾಟಕ ರಾಜ್ಯ ಚುನಾವಣೆ ಗೆಲ್ಲುವುದು ಮುಖ್ಯ, ಯಾಕೆಂದರೆ ಜಿಎಸ್ ಪಾಟೀಲ್ ಗೆದ್ದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಅಧಿಕಾರ ಬಂದರೆ ದೇಶದಲ್ಲಿ ಬದಲಾವಣೆ ಆಗುತ್ತದೆ. ಬಹಿರಂಗ ಸಭೆಗೆ ಇಷ್ಟೊಂದು ಜನ ಬಂದಿದ್ದಾರೆ. ಬಿಸಿಲಿನಲ್ಲಿ ನಿಂತಿದ್ದಾರೆ. ಇನ್ನೊಂದು 20 ಸಾವಿರ ರೂಪಾಯಿ ಖರ್ಚು ಮಾಡಿದರೆ, ಇವರೆಲ್ಲರಿಗೂ ನೆರಳಾಗುತ್ತಿತ್ತು. ನಾವು ನೆರಳಲ್ಲಿ, ಅವರು ಬಿಸಿಲಿನಲ್ಲಿಯೇ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು..
ಮಾತು ಮುಂದುವರಿಸಿದ ಮಲ್ಲಿಕಾರ್ಜುನ ಖರ್ಗೆ, ಈಗಿನ ಸರ್ಕಾರ 40% ಕಮಿಷನ್ ಸರ್ಕಾರ. ಇವರಿಗೆ ಪಾಠ ಕಲಿಸಿಬೇಕು. ಮನ್ ಕಿ ಬಾತ್, ಘರ್ ಕಿ ಬಾತ್‌ನಲ್ಲಿ ಹೆಣ್ಣು ಮಕ್ಕಳ ಬಗ್ಗೆ, ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಮಾತನಾಡುತ್ತಾರೆ. ಆದರೆ ಲಂಚ ತೆಗೆದುಕೊಂಡವರ ಬಗ್ಗೆ ಮಾತನಾಡುವುದಿಲ್ಲ. 40% ತೆಗೆದುಕೊಂಡವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಎಲ್ಲಿದೆ ನಿಮ್ಮ ಈಡಿ, ಸಿಬಿಐ, ಇನ್ಕಮ್ ಟ್ಯಾಕ್ಸ್ ಇಲಾಖೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಇಷ್ಟೊಂದು ಲಂಚ ಹೊಡೆಯುತ್ತಿದ್ದಾರೆ. ರಾಷ್ಟ್ರಪತಿಗೆ, ರಾಜ್ಯಪಾಲರಿಗೆ ಹಾಗೂ ಪ್ರಧಾನಿಗೆ ಬರವಣಿಗೆ ಮೂಲಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಅಂತಾರೆ. 70 ವರ್ಷದಿಂದ ನಾವು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಕ್ಕೆ, ನಿಮ್ಮಂತ ಚಹಾ ಮಾರುವವನು ಪ್ರಧಾನಿಯಾಗಿದ್ದಾನೆ. ನನ್ನಂತ ಕೂಲಿ ಕಾರ್ಮಿಕನ ಮಗ ವಿರೋಧ ಪಕ್ಷದ ನಾಯಕನಾಗಿದ್ದೇನೆ ಎಂದು ಹೇಳಿದರು.

ಗಾಂಧೀಜಿ ಅವರನ್ನು ಇಡೀ ಜಗತ್ತು ಪ್ರೀತಿ ಮಾಡಿದರೆ, ನೀವು ಗೋಡ್ಸೆಯನ್ನು ಪ್ರೀತಿ ಮಾಡುತ್ತೀರಿ. ಇತ್ತೀಚಿಗೆ ಅಂಬೇಡ್ಕರ್ ಫೋಟೋ ಯಾಕೆ ಹಾಕ್ತಿದ್ದಾರೆ ಎಂದರೆ ದಲಿತರ ಓಟಿಗಾಗಿ. ದಲಿತರ ನಡುವೆ ಲೆಫ್ಟ್ ರೈಟ್ ಅಂತ ಮಾಡಿ ಜಗಳ ಹಚ್ಚೋದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಧಂಗೆ ಏಳುತ್ತಾರೆ ಅಂತಾ ಅಮಿತ್ ಶಾ ಹೇಳುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಗುಜರಾತ್‌ನಂತೆ ದೇಶದಲ್ಲಿ ಎಲ್ಲಿಯಾದರೂ ಧಂಗೆಯಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.
ಅನೇಕ ಜನ ಕಾಂಗ್ರೆಸ್‌ನವರು ದೇಶಕ್ಕಾಗಿ ಶಿಲುಬೆಗೆ ಏರಿದ್ದಾರೆ. ದೇಶಕ್ಕಾಗಿ ಆರ್‌ಎಸ್‌ಎಸ್‌ನ ಒಂದು ನಾಯಿನೂ ಸತ್ತಿಲ್ಲ. ನಾವು ಬಡವರಿಗೆ ಪುಕ್ಕಟ್ಟೆ ಅಕ್ಕಿ ಕೊಡುತ್ತಿದ್ದೇವೆ. ಬಡವರಿಗೆ ನರೇಗಾದಲ್ಲಿ ಜನರಿಗೆ ಕೆಲಸ ಕೊಟ್ಟಿದ್ದೇವೆ. ನಿಮ್ಮದೇನಿದೆ ನರೇಗಾದಲ್ಲಿಯೂ ಲಂಚ ಹೊಡೆಯೋ ಕೆಲಸ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದರು.












Click it and Unblock the Notifications