ಕರ್ನಾಟಕ ಚುನಾವಣೆ: ಗದಗ ಜಿಲ್ಲೆಯ ಮತದಾರರ ಸಂಪೂರ್ಣ ವಿವರ
ಗದಗ, ಏಪ್ರಿಲ್ 3: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತಂಡಗಳನ್ನು ರಚಿಸಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ 17 ಚೆಕ್ ಪೋಸ್ಟಗಳನ್ನು ಸ್ಥಾಪಿಸಲಾಗಿದೆ ಎಂದರು.

ದಿನದ 24 ಗಂಟೆ ಕಾರ್ಯನಿರ್ವಹಿಸುವ ಪ್ರತಿ ಚೆಕ್ ಪೋಸ್ಟಗೆ 3 ಜನ ಅಧಿಕಾರಿ ಹಾಗೂ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲನೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 9 ರಂತೆ ಒಟ್ಟು 36 ಸಂಚಾರಿ ದಳ, 12 ವಿಡಿಯೋ ಕಣ್ಗಾವಲು ತಂಡ ಹಾಗೂ 4 ವಿಡಿಯೋ ವೀಕ್ಷಣಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇಡಲು ಒಟ್ಟು 8 ಲೆಕ್ಕ ತಂಡಗಳನ್ನು ಹಾಗೂ 4 ಜನ ಸಹಾಯಕ ವೆಚ್ಚ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಮತದಾನದ ಮಹತ್ವ ಹಾಗೂ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕರ ಅಧ್ಯಕ್ಷತೆಯಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾದಂತಹ ಮತಗಟ್ಟೆಗಳಲ್ಲಿ ಮನೆ ಮನೆ ಭೇಟಿ ನೀಡಿ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರಪಿಸಲಾಗುತ್ತಿದೆ.

ಅಲ್ಲದೇ ಮತ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದ್ದು, ವಲಸೆ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ಪ್ರೇರೆಪಿಸುವಂತೆ ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮತದಾನ ಪ್ರಕ್ರಿಯೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಕ್ರಿಕೆಟಿಗ ಸುನೀಲ್ ಜೋಶಿ ಹಾಗೂ ಕುಸ್ತಿ ಪಟುವಾದ ಪ್ರೇಮಾ ಹುಚ್ಚಣ್ಣವರ ಹಾಗೂ ಭೀಮಪ್ಪ ಇವರುಗಳನ್ನು ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ಎಂಭತ್ತು ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತ ಪತ್ರದ ಸೌಲಭ್ಯವನ್ನು ಒದಗಿಸಲಾಗಿದ್ದು. ಚುನಾವಣಾ ದಿನಾಂಕ ಘೋಷಣೆಯಾದ ಐದು ದಿನಗಳ ಒಳಗಾಗಿ 12ಡಿ ನಮೂನೆಯಲ್ಲಿ ಅಂಚೆ ಮತ ಚಲಾಯಿಸಲು ಇಚ್ಛಿಸುವವರು ಬಿ.ಎಲ್.ಓಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಮತದಾರರಿಗೆ ಮತದಾನದ ದಿನದಂದು ಅಂಚೆ ಮತ ಚಲಾಯಿಸುವ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ದಾಖಲಿಸಲು ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, 1950 ಸಹಾಯವಾಣಿ ಸಂಖ್ಯೆಯಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಮಾತನಾಡಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ರೂ.62,99,000 ನಗದು, 397.83 ಲೀ ಮಧ್ಯ, 2.83 ಕೆ.ಜಿ.ಡ್ರಗ್ಸ, 4.046 ಕೆ.ಜಿ ಚಿನ್ನ ಸೇರಿದಂತೆ ಒಟ್ಟಾರೆಯಾಗಿ ವಶಪಡಿಸಿಕೊಳ್ಳಲಾದ ಸಾಮಗ್ರಿಗಳ ಮೌಲ್ಯ ರೂ. 2,48,54,224 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಗದಗ ಜಿಲ್ಲೆಯಲ್ಲಿ ಒಟ್ಟು ಮತದಾರರಿದ್ದಾರೆ. ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 1,13,050 ಪುರುಷ ಮತದಾರರಿದ್ದು, 1,12,052 ಮಹಿಳಾ ಮಮತದಾರರಿದ್ದು, 13 ತೃತೀಯ ಲಿಂಗಿ ಮತದಾರರಿದ್ದಾರೆ. ಗದಗ ತಾಲೂಕಿನಲ್ಲಿ ಒಟ್ಟು 1,09,624 ಪುರುಷ ಮತದಾರರಿದ್ದು, 1,11,433 ಮಹಿಳಾ ಮಮತದಾರರಿದ್ದು, 17 ತೃತೀಯ ಲಿಂಗಿ ಮತದಾರರಿದ್ದಾರೆ. ರೋಣಾ ತಾಲೂಕಿನಲ್ಲಿ ಒಟ್ಟು 1,15,225 ಪುರುಷ ಮತದಾರರಿದ್ದು, 1,14,804 ಮಹಿಳಾ ಮಮತದಾರರಿದ್ದು, 21 ತೃತೀಯ ಲಿಂಗಿ ಮತದಾರರಿದ್ದಾರೆ. ಹಾಗೂ ನರಗುಂದ ತಾಲೂಕಿನಲ್ಲಿ ಒಟ್ಟು 93,936 ಪುರುಷ ಮತದಾರರಿದ್ದು, 91,192 ಮಹಿಳಾ ಮಮತದಾರರಿದ್ದು, 7 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.












Click it and Unblock the Notifications