ಗದಗ: ಎಚ್.ಕೆ.ಪಾಟೀಲ್ ಆಪ್ತರ ಮನೆ ಮೇಲೆ ದಾಳಿ
ಗದಗ, ಮೇ 10: ರಾಜ್ಯದ ಕಾಂಗ್ರೆಸ್ ಮುಖಂಡರ ಮೇಲೆ ಸತತವಾಗಿ ನಡೆಯುತ್ತಿರುವ ಐಟಿ ದಾಳಿಗಳು ಮುಂದುವರೆದಿದ್ದು ಇಂದು ಸಚಿವ ಎಚ್.ಕೆ.ಪಾಟೀಲ್ ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಸಚಿವ ಹೆಚ್. ಕೆ. ಪಾಟೀಲ್ ಆಪ್ತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ್ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು ಐಟಿ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದಾರೆ.
ಗದಗದ ಕಳಸಾಪುರ ರಸ್ತೆಯಲ್ಲಿರುವ ಗುರಣ್ಣ ಬಳಗಾನೂರ್ ಮನೆಯ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಮನೆ ಕಚೇರಿ ಮತ್ತು ಇತರ ಜಾಗಗಳಲ್ಲೂ ದಾಳಿ ನಡೆಸಿದ್ದು ನಗದು ಮತ್ತು ಕೆಲವು ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗುರಣ್ಣ ಬಳಗಾನೂರ್ ಮಾತ್ರವಲ್ಲದೆ ಎಚ್.ಕೆ.ಪಾಟೀಲ್ ಅವರ ಆಪ್ತರಾದ ಮಂಜುನಾಥ ಕಬಾಡಿ, ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ಹಾಗೂ ವೈದ್ಯ ಅನಂತ ಶಿವಪುರ್ ಮನೆ ಹಾಗೂ ಕಚೇರಿ ಮೇಲೆ ಕೂಡಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದೇ ಮುಧೋಳದಲ್ಲೂ ಕಾಂಗ್ರೆಸ್ ಮುಖಮಡರ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.












Click it and Unblock the Notifications