ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್ ಸಿಂಗ್ ವಿಶ್ವಾಸ
ಹಾವೇರಿ, ಅಕ್ಟೋಬರ್ 15: ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಇದೆ. ಪಂಚ ರಾಜ್ಯ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ರಾಜ್ಯದಲ್ಲೂ 2023 ರ ಚುನಾವಣೆ ತಯಾರಿ ಬಹಳ ಚೆನ್ನಾಗಿ ನಡೆಯುತ್ತಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾದಗ ಮಾಸೂರಿನಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಗಳಿಂದಾಗಿ ಬಿಜೆಪಿ ಮತ್ತೆ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಪಡೆಯಲಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಗೋವಾ, ಮಣಿಪುರ, ಉತ್ತರಾಖಂಡ, ಉತ್ತರಪ್ರದೇಶಗಳಲ್ಲಿ ಬಿಜೆಪಿ ಅಧಿಕಾರಗಳಿಸಿದೆ. ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಜನರು ಬಿಜೆಪಿಗೆ ಮತ ಕೊಟ್ಟು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
Breaking: ಸಚಿವ ಸಂಪುಟ ವಿಸ್ತರಣೆ- ಸಧ್ಯದಲ್ಲಿಯೇ ನವದೆಹಲಿಗೆ ಭೇಟಿ : ಸಿಎಂ ಬೊಮ್ಮಾಯಿ
ಬಡವರು, ರೈತರು, ಮಹಿಳೆಯರು ಬಿಜೆಪಿ ಮತ್ತು ಮೋದಿಜಿ ಪರವಾಗಿದ್ದಾರೆ. ಜನಧನ್, ಕಿಸಾನ್ ಸಮ್ಮಾನ್ ಪರಿಣಾಮವಾಗಿ ರೈತರು ಮತ್ತು ಮಹಿಳೆಯರು ಬಿಜೆಪಿ ಪರವಿದ್ದಾರೆ. ಮನೆಮನೆಗೆ ನಲ್ಲಿ ನೀರು ಅಭಿಯಾನ ಯಶಸ್ವಿಯಾಗಿದೆ. ಉಜ್ವಲ ಯೋಜನೆ, ಶೌಚಾಲಯ ನಿರ್ಮಾಣದಂಥ ಪ್ರಮುಖ ಯೋಜನೆಗಳು ಜಾರಿಯಾಗಿವೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿತ್ತು. ಆದರೆ, ಮೋದಿಜಿ ಸರಕಾರವು ರೈತರು ಮತ್ತು ಬಡವರ ಪರವಾಗಿದೆ. ಈ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆದಿದೆ ಎಂದರು.
ಕಾಂಗ್ರೆಸ್ 2 ರಾಜ್ಯಗಳಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಮುಂದೆ ಅಲ್ಲಿಯೂ ಅದು ಅಧಿಕಾರ ಕಳಕೊಳ್ಳಲಿದೆ. ಭಾರತ್ ಜೋಡೋ ಯಾತ್ರೆ ನಡುವೆ ಅನೇಕ ಕಾಂಗ್ರೆಸ್ಸಿಗರು ಆ ಪಕ್ಷವನ್ನು ತೊರೆಯುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿ, ಬಿಜೆಪಿ ಪರವಾಗಿ ಜನರು ನಿಲ್ಲಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಅತಿ ಹೆಚ್ಚು ಮತದೊಂದಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಗಣಿನಾಡಿ ಎಂಟ್ರಿಕೊಟ್ಟ ಭಾರತ್ ಜೋಡೋ; ರಾಹುಲ್ ಜೊತೆಗೆ ಹೆಜ್ಜೆ ಹಾಕಿದ ಖರ್ಗೆ, ಭೂಪೇಶ್ ಬಘೇಲ್
ಇನ್ನು ಕರ್ನಾಟಕದಲ್ಲಿಯೂ 150 ಕ್ಕೂ ಹೆಚ್ಚು ಸೀಟು ಗೆದ್ದು ಇತಿಹಾಸ ಸೃಷ್ಟಿಸುತ್ತೇವೆ. ರಾಹುಲ್ ಗಾಂಧಿ ಇಂದು ಬಳ್ಳಾರಿಯಲ್ಲಿ ಭಾಷಣ ಮಾಡಲಿದ್ದಾರೆ. ಅವರು ನಿಜವಾಗಿಯೂ ಕರ್ನಾಟಕದ ಬಗ್ಗೆ ಗೊತ್ತಿದ್ದರೆ. ಪೇಪರ್ ನೋಡದೇ ಭಾಷಣ ಮಾಡಲಿ. 13 ದಿನಗಳಿಂದ ಕರ್ನಾಟಕದಲ್ಲಿ ಓಡಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ಅವರ ವಿಷನ್ ಏನು? ಐ ಕ್ಯೂ ಏನು. ಕರ್ನಾಟಕದಲ್ಲಿ ಇದ್ದು ಕರ್ನಾಟಕದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ? ಮಾತಾಡಲಿ. ಇಲ್ಲದಿದ್ದರೆ ಇವರ ಭಾರತ್ ಜೋಡೋ ಯಾತ್ರೆ ಮಾರ್ನಿಂಗ್ ವಾಕ್ ಮಾಡಿದ ಹಾಗೆ ಆಗುತ್ತದೆ ವ್ಯಂಗ್ಯವಾಡಿದರು.

ವರಕವಿ ಸರ್ವಜ್ಞ ಮೂರ್ತಿಗೆ ಮಾಲಾರ್ಪಣೆ ಮಾಡಿದ ಅರುಣ್ ಸಿಂಗ್, " ಕವಿ ಸರ್ವಜ್ಞ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದವರು. ಸಮಾಜದಲ್ಲಿ ಬೇಧ ಭಾವ ತೊಡೆದು ಹಾಕಲು ಶ್ರಮಿಸಿದರು. ಹಳ್ಳಿ ಹಳ್ಳಿ ಓಡಾಡಿ ಜನ ಜಾಗೃತಿ ಮಾಡಿದರು. ಎಲ್ಲರೂ ಒಂದೇ ಎಂಬುದನ್ನು ಸಾರಿದರು. ಅವರ ಮೂರ್ತಿಗೆ ಇಂದು ಮಾಲಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ" ಎಂದು ಅರುಣ್ ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಚಿವರಾದ ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ್, ಜಿಲ್ಲಾಧ್ಯಕ್ಷ ಸಿದ್ದರಾಜು ಕಲಕೋಟಿ, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪ್ರಭಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.