ಅಜ್ಜಿ ಪಾತ್ರ ಆದ್ರೂ ಕೊಡಿ, ಸಂಭಾವನೆ ಬೇಡ: 34 ವರ್ಷಗಳ ಬಳಿಕ ರವಿಚಂದ್ರನ್‌ಗೆ ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ
ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟವರು. ಈ ಪೈಕಿ ಅವರ "ಹಳ್ಳಿಮೇಷ್ಟ್ರು" ಸಿನಿಮಾವಂತೂ ಇಂದಿಗೂ ಕನ್ನಡಿಗರ ಫೇವರೇಟ್. ಈ ಚಿತ್ರ ರವಿಚಂದ್ರನ್ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಒಂದೆಡೆಯಾದರೆ, ಕ್ರೇಜಿಸ್ಟಾರ್ ವಿರುದ್ಧ ಇದೇ ಚಿತ್ರದ ನಟಿ ಗಂಭೀರ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದರು. 34 ವರ್ಷಗಳ ಹಿಂದೆ ಕೇಳಿಬಂದಿದ್ದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಆ ನಟಿ ಈಗ ಕಣ್ಣೀರಿಡುತ್ತಾ ಕ್ಷಮೆಯಾಚಿಸಿದ್ದಾರೆ.
ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಜಗಳಗಂಟಿ ಪಾತ್ರದಲ್ಲಿ ನಟಿಸಿದ್ದರು ನಟಿ ಬಿಂದಿಯಾ (ಫರ್ಹೀನ್ ಖಾನ್). ಇವರು ಕನ್ನಡ ಚಿತ್ರರಂಗಕ್ಕೆ ಹೊಸಬರಾದರೂ ತಮ್ಮ ಪಾತ್ರದ ಮೂಲಕ ಇಂದಿಗೂ ಹಳ್ಳಿಮೇಷ್ಟ್ರು ಹೆಂಡ್ತಿ ʼಪರಿಮಳʼ ಅಂದ್ರೆ ಥಟ್ ಅಂತ ನೆನಪಾಗ್ತಾರೆ. ಅಷ್ಟರಮಟ್ಟಿಗೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು ಬಿಂದಿಯಾ. ಇತ್ತೀಚೆಗೆ ನಿರ್ದೇಶಕ ರಘುರಾಮ್ ಅವರ 'ಆರ್‌ಆರ್ ಕನಸುಗಳ ಕಾರ್ಖಾನೆ' ಯೂಟ್ಯೂಬ್ ಚಾನೆಲ್‌ನ 'ನೂರೊಂದು ನೆನಪು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಂದಿಯಾ, ಅಂದಿನ ಘಟನೆಯನ್ನು ನೆನೆದು ಕ್ಷಮೆಯಾಚಿಸಿದ್ದಾರೆ.

ಏನಿದು ವಿವಾದ?
1992ರಲ್ಲಿ ತೆರೆಕಂಡ ರವಿಚಂದ್ರನ್ ನಟನೆಯ ಸೂಪರ್ ಹಿಟ್ ಸಿನಿಮಾ 'ಹಳ್ಳಿಮೇಷ್ಟ್ರು'. ತಮಿಳಿನ 'ಮುಂದಾನೈ ಮುಡಿಚು' ಚಿತ್ರದ ರೀಮೇಕ್ ಆಗಿದ್ದ ಈ ಸಿನಿಮಾದಲ್ಲಿ ಮುಂಬೈ ಮೂಲದ ನಟಿ ಬಿಂದಿಯಾ 'ಪರಿಮಳಾ' ಎಂಬ ಮುಖ್ಯ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ, ಇವರಿಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಸಿನಿಮಾ ಮುಗಿಯುವ ಹೊತ್ತಿಗೆ ದೊಡ್ಡ ವಿವಾದವೊಂದು ಸೃಷ್ಟಿಯಾಗಿತ್ತು. ಮ್ಯಾಗಜೀನ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, "ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು" ಎಂದು ಬಿಂದಿಯಾ ಆರೋಪಿಸಿದ್ದಾರೆಂಬ ವರದಿ ಪ್ರಕಟವಾಗಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿತ್ತು.
ಮಾನನಷ್ಟ ಮೊಕದ್ದಮೆ ಹಾಕಿದ್ದ ರವಿಚಂದ್ರನ್
ಯಾವುದೇ ವಿವಾದಗಳಿಲ್ಲದೆ ಸಿನಿಮಾ ತಪಸ್ಸಿನಲ್ಲಿರುತ್ತಿದ್ದ ರವಿಚಂದ್ರನ್ ಅವರಿಗೆ ಈ ಸುಳ್ಳು ಆರೋಪ ತೀವ್ರ ಮನಸ್ಸಿಗೆ ತಂದಿತ್ತು. ಸತ್ಯವನ್ನು ಜಗತ್ತಿಗೆ ತಿಳಿಸಲು ನಿರ್ಧರಿಸಿದ ಅವರು, ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿ ನಟಿ ಬಿಂದಿಯಾ ವಿರುದ್ಧ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು. ವಿಶೇಷವೆಂದರೆ, ಅವರು ಕೇಳಿದ್ದ ಪರಿಹಾರದ ಮೊತ್ತ ಕೇವಲ 1 ರೂಪಾಯಿ.
ಕೋರ್ಟ್ ಮೆಟ್ಟಿಲೇರಿದಾಗ ತಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ, ತಾವು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಒಪ್ಪಿಕೊಂಡ ಬಿಂದಿಯಾ ಅಂದೇ ಕ್ಷಮೆಯಾಚಿಸಿದ್ದರು. ಬಳಿಕ ರವಿಚಂದ್ರನ್ ಕೇಸ್ ಗೆದ್ದು, ಮಾನವೀಯತೆಯಿಂದ ಪ್ರಕರಣವನ್ನು ವಾಪಸ್ ಪಡೆದು ಇತ್ಯರ್ಥಗೊಳಿಸಿದ್ದರು.

ನಟಿ ಬಿಂದಿಯಾ ಹೇಳಿದ್ದೇನು?
"ನಾನು ಆಗ ತುಂಬಾ ಚಿಕ್ಕ ಹುಡುಗಿ, ನನಗೆ ಪ್ರಬುದ್ಧತೆ ಇರಲಿಲ್ಲ. ನನಗೆ ಕನ್ನಡ ಕೂಡ ಬರುತ್ತಿರಲಿಲ್ಲ. ಆದರೆ ರವಿ ಸರ್ ನನ್ನನ್ನು ಮೊದಲ ಭೇಟಿಯಲ್ಲೇ ನಾಯಕಿಯಾಗಿ ಆಯ್ಕೆ ಮಾಡಿ, ಬೆಂಬಲವಾಗಿ ನಿಂತು ಡೈಲಾಗ್ ಮತ್ತು ನಟನೆಯನ್ನು ಹೇಳಿಕೊಟ್ಟಿದ್ದರು. ಆದರೆ ಕೊನೆಗೆ ಎಲ್ಲವೂ ಹದಗೆಟ್ಟಿತು" ಎಂದಿದ್ದಾರೆ.
"ಬಾಂಬೆಯಲ್ಲಿದ್ದ ನನ್ನನ್ನು 'ಜಾನ್ ತೇರೆ ನಾಮ್' ಸಿನಿಮಾ ಹಿಟ್ ಆದ ಬಳಿಕ ರವಿ ಸರ್ ಚಿತ್ರಕ್ಕೆ ಆರಿಸಿಕೊಂಡಿದ್ದರು. ಆದರೆ ಚಿತ್ರದ ನಂತರ ಪತ್ರಕರ್ತೆಯೊಬ್ಬಳು ಮ್ಯಾಗಜೀನ್‌ನಲ್ಲಿ ನಾನು ಹೇಳದ ಮಾತುಗಳನ್ನು ತಿರುಚಿ ಬರೆದಿದ್ದಳು. ನಾನು ಹೇಳಿದ್ದೇ ಬೇರೆ, ಅಲ್ಲಿ ಪ್ರಕಟವಾಗಿದ್ದೇ ಬೇರೆ. ಇದರಿಂದ ರವಿ ಸರ್ ವ್ಯಕ್ತಿತ್ವಕ್ಕೆ ಧಕ್ಕೆಯಾಯಿತು. ಕೋರ್ಟ್‌ನಲ್ಲಿ ಅಷ್ಟು ದೊಡ್ಡ ನಟನನ್ನು ನೋಡಿದಾಗ ನನಗೆ ಇವತ್ತಿಗೂ ಸಂಕಟವಾಗುತ್ತದೆ. ಅವರು ಯಾವುದೇ ತಪ್ಪು ಮಾಡಿರಲಿಲ್ಲ" ಎಂದು ಬಿಂದಿಯಾ ಕಣ್ಣೀರು ಹಾಕಿದ್ದಾರೆ.
ಸಂಭಾವನೆ ಇಲ್ಲದೆ ನಟಿಸಲು ಸಿದ್ಧ
ಅಂದಿನ ಘಟನೆಯ ನಂತರ ರವಿಚಂದ್ರನ್ ಅವರೊಂದಿಗೆ ಮಾತನಾಡಲು ಸಾಧ್ಯವಾಗದ ಬಿಂದಿಯಾ, ಈಗ ಯೂಟ್ಯೂಬ್ ಸಂದರ್ಶನದ ಮೂಲಕ ಇಡೀ ಕರ್ನಾಟಕದ ಜನತೆ ಹಾಗೂ ರವಿಚಂದ್ರನ್ ಅವರಿಗೆ ಕ್ಷಮೆ ಕೇಳಿದ್ದಾರೆ. "ರವಿ ಸರ್ ನನಗೆ ಅಷ್ಟು ದೊಡ್ಡ ಬ್ರೇಕ್ ಕೊಟ್ಟಿದ್ದರು. ಅಂದು ಬುದ್ಧಿ ಇಲ್ಲದೆ ತಪ್ಪು ನಡೆದುಹೋಗಿದೆ. ಇವತ್ತಿಗೂ ರವಿಚಂದ್ರನ್ ಸರ್ ಅವರ ಸಿನಿಮಾದಲ್ಲಿ ತಾಯಿ ಅಥವಾ ಅಜ್ಜಿ ಪಾತ್ರ ಸಿಕ್ಕರೂ ನಾನು ಯಾವುದೇ ಸಂಭಾವನೆ ಪಡೆಯದೆ ನಟಿಸಲು ಸಿದ್ಧಳಾಗಿದ್ದೇನೆ. ದಯವಿಟ್ಟು ನನಗೆ ಒಂದು ಅವಕಾಶ ಕೊಡಿ" ಎಂದು ಭಾವುಕರಾಗಿ ವಿನಂತಿಸಿಕೊಂಡಿದ್ದಾರೆ.













Click it and Unblock the Notifications