ತಮಿಳುನಾಡು: 75 ವರ್ಷಗಳ ದ್ರಾವಿಡ ಅಧಿಪತ್ಯ ಅಂತ್ಯ, ವಿಜಯ್ ಮೊದಲ ಅಧಿವೇಶನದಲ್ಲಿ ಸೃಷ್ಟಿಯಾಯ್ತು ಹೊಸ ಇತಿಹಾಸ

ಚೆನ್ನೈ, ಜೂನ್ 18: ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಅಧಿಕಾರಕ್ಕೆ ಬಂದ ನಂತರ ಮೊದಲ ವಿಧಾನಸಭೆ ಜಂಟಿ ಅಧಿವೇಶನ ಇಂದು (ಜೂನ್ 18) ಆರಂಭವಾಗಿದೆ. ಹೊಸ ಸರ್ಕಾರ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ರಾಜಕೀಯ ವಲಯದ ಗಮನ ಸೆಳೆಯಿತು. ಇದೇ ವೇಳೆ ಅಪರೂಪದ ಘಟನೆಯೊಂದು ನಡೆದಿರುವುದು ಭಾರಿ ಕುತೂಹಲ ಹುಟ್ಟುಹಾಕಿದೆ.

ಸಾಮಾನ್ಯವಾಗಿ ಹೊಸ ಸರ್ಕಾರ ಅಧಿಕಾರ ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲ ವಿಧಾನಸಭೆ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವುದು ವಾಡಿಕೆ. ಅದೇ ಸಂಪ್ರದಾಯದಂತೆ ಗುರುವಾರ ಚೆನ್ನೈನ ಸಚಿವಾಲಯದಲ್ಲಿರುವ ವಿಧಾನಸಭೆ ಆವರಣದಲ್ಲಿ ಜಂಟಿ ಅಧಿವೇಶನ ಪ್ರಾರಂಭವಾಯಿತು.

Tamil Nadu Assembly Session 2026 C Joseph Vijay s TVK Government s First Session Begins Peacefully

ರಾಜ್ಯಪಾಲರಿಗೆ ಭರ್ಜರಿ ಸ್ವಾಗತ

ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಸಭಾಪತಿ ಮತ್ತು ವಿಧಾನಸಭೆಯ ಕಾರ್ಯದರ್ಶಿ ಸೇರಿ ಪ್ರಮುಖರು ರಾಜ್ಯಪಾಲರನ್ನು ಬರಮಾಡಿಕೊಂಡರು. ತದನಂತರ, ತಮಿಳು ತಾಯಿ ಪ್ರಾರ್ಥನೆ ಹಾಗೂ ರಾಷ್ಟ್ರಗೀತೆಯೊಂದಿಗೆ ಅಧಿವೇಶನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಡಿಎಂಕೆ ನಾಯಕರು

ಬಳಿಕ ರಾಜ್ಯಪಾಲರು ತಮ್ಮ ಭಾಷಣ ಓದಲು ಪ್ರಾರಂಭಿಸಿದರು. ಹೊಸ ಸರ್ಕಾರದ ನೀತಿ, ಚುನಾವಣಾ ಭರವಸೆಗಳು, ಭವಿಷ್ಯದ ಯೋಜನೆಗಳು ಮತ್ತು ಆಡಳಿತಾತ್ಮಕ ಆದ್ಯತೆಗಳ ಕುರಿತಾದ ಅಂಶಗಳು ಭಾಷಣದಲ್ಲಿ ಒಳಗೊಂಡಿದ್ದವು. ಈ ನಡುವೆ ವಿರೋಧ ಪಕ್ಷವಾದ ಡಿಎಂಕೆ ಶಾಸಕರು ಕಪ್ಪು ಪಟ್ಟಿ ಧರಿಸಿ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ್ದು ಗಮನ ಸೆಳೆಯಿತು. ಸರ್ಕಾರದ ಕೆಲವು ಕ್ರಮಗಳನ್ನು ವಿರೋಧಿಸುವ ಉದ್ದೇಶದಿಂದ ಡಿಎಂಕೆ ನಾಯಕರು ಈ ಕಪ್ಪು ಪಟ್ಟಿಯನ್ನು ಧರಿಸಿದ್ದರು ಎನ್ನಲಾಗಿದೆ.

ವಿಧಾನಸಭೆ ಆವರಣದ ಹೊರಗೆ ಡಿಎಂಕೆ ಶಾಸಕರು ಮತ್ತು ಕೆಲವು ಪದಾಧಿಕಾರಿಗಳು ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಅಧಿವೇಶನ ಆರಂಭವಾಗುವ ಮುನ್ನವೇ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇಂದು ಎಲ್ಲರ ಗಮನ ಸೆಳೆದದ್ದು ಮಾತ್ರ ಬೇರೆಯದೇ ಆದ ಒಂದು ವಿಷಯ. ಸಾಮಾನ್ಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲ ವಿಧಾನಸಭೆ ಅಧಿವೇಶನದಲ್ಲಿ, ವಿಪಕ್ಷಗಳು ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸುವುದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು ಅಥವಾ ಸಭಾತ್ಯಾಗ ಮಾಡುವುದು ತಮಿಳುನಾಡು ರಾಜಕೀಯದಲ್ಲಿ ವಾಡಿಕೆಯಾಗಿ ನಡೆದುಕೊಂಡು ಬಂದಿದೆ.

ಇದೇ ಫಸ್ಟ್‌ ಟೈಮ್‌.. ಗದ್ದಲವಿಲ್ಲದ ಅಧಿವೇಶನ

ಆದರೆ ಇಂದು ರಾಜ್ಯಪಾಲರ ಭಾಷಣದ ಸಮಯದಲ್ಲಿ ಯಾವುದೇ ದೊಡ್ಡ ಗದ್ದಲ, ಗಲಾಟೆ, ಘೋಷಣೆಗಳು ಅಥವಾ ಸಭಾತ್ಯಾಗದಂತಹ ಘಟನೆಗಳಿಗೆ ವಿಜಯ್ ನೇತೃತ್ವ ಸರಕಾರದ ಅಧಿವೇಶನ ಸಾಕ್ಷಿಯಾಗಲೇ ಇಲ್ಲ. ತೀವ್ರ ರಾಜಕೀಯ ಪೈಪೋಟಿ ಹೊರತಾಗಿಯೂ, ರಾಜ್ಯಪಾಲರ ಭಾಷಣವು ಅತ್ಯಂತ ಶಾಂತಿಯುತವಾಗಿ ನಡೆದಿದ್ದು ವಿಶೇಷ. ಇತ್ತೀಚಿನ ಚುನಾವಣೆಯಲ್ಲಿ ಎದುರಾಗಿದ್ದ ತೀವ್ರ ಪೈಪೋಟಿಯ ನಂತರ ಆಡಳಿತ ಪಕ್ಷ ಮತ್ತು ವಿಪಕ್ಷಗಳು ನೇರ ಮುಖಾಮುಖಿಯಾಗಿ ಭಾರಿ ಸಂಘರ್ಷಕ್ಕಿಳಿಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಅಧಿವೇಶನದ ಮೊದಲ ದಿನ ಎಲ್ಲವೂ ಅತ್ಯಂತ ಶಾಂತವಾಗಿ ಮುಕ್ತಾಯಗೊಂಡಿದ್ದು, ತಮಿಳುನಾಡಿನ ಒಂದು ಇತಿಹಾಸ ಸೃಷ್ಟಿಸಿತು.

ಐಹಿಹಾಸಿಕ ಘಟನೆಗೆ ಸಾಕ್ಷಿಯಾದ ತಮಿಳುನಾಡು ಅಧಿವೇಶನ:

ತಮಿಳುನಾಡು ವಿಧಾನಸಭೆಯಲ್ಲಿ ಇದುವರೆಗೆ ಎಂದೂ ನಡೆಯದ ಮತ್ತೊಂದು ಐತಿಹಾಸಿಕ ಘಟನೆ ಇಂದು ಜರುಗಿದೆ. ಹಿಂದೆ ಕಾಂಗ್ರೆಸ್ ಆಡಳಿತವನ್ನು ಪರಾಭವಗೊಳಿಸಿ, ಅಣ್ಣಾದೊರೈ ಅವರ ನೇತೃತ್ವದಲ್ಲಿ ಡಿಎಂಕೆ ಅಧಿಕಾರ ಚುಕ್ಕಾಣಿ ಹಿಡಿದಾಗ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಂಡಿತ್ತು. ತದನಂತರ ಕಲೈಂಜರ್ ಕರುಣಾನಿಧಿ ಅವರು ಮುಖ್ಯಮಂತ್ರಿಯಾದರು. ಆ ಬಳಿಕ ಎಐಎಡಿಎಂಕೆ ಪಕ್ಷ ಅಸ್ತಿತ್ವಕ್ಕೆ ಬಂದು, ಎಂ.ಜಿ. ರಾಮಚಂದ್ರನ್ ಅವರು ಅಧಿಕಾರ ಹಿಡಿದಾಗ ಡಿಎಂಕೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿತ್ತು. ಹೀಗೆ ತಮಿಳುನಾಡು ವಿಧಾನಸಭೆಯು ಕಾಲಕಾಲಕ್ಕೆ ಜಯಲಲಿತಾ, ಪನ್ನೀರ್‌ಸೆಲ್ವಂ, ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಪ್ರಮುಖ ಮುಖ್ಯಮಂತ್ರಿಗಳನ್ನು ಕಂಡಿದೆ.

ಈ ಹಿಂದೆ ಎಐಎಡಿಎಂಕೆ ಆಡಳಿತ ಪಕ್ಷವಾಗಿದ್ದರೆ, ಡಿಎಂಕೆ ವಿರೋಧ ಪಕ್ಷವಾಗಿರುತ್ತಿತ್ತು. ಒಂದು ವೇಳೆ ಡಿಎಂಕೆ ಆಡಳಿತ ಪಕ್ಷವಾಗಿದ್ದರೆ ಎಐಎಡಿಎಂಕೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುತ್ತಿತ್ತು. ಆದರೆ ತಮಿಳುನಾಡಿನ ಸುಮಾರು 75 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಎಂದೂ ಸಂಭವಿಸದ ರೀತಿಯಲ್ಲಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪ್ರಮುಖ ಪಕ್ಷಗಳು ವಿಪಕ್ಷದ ಸಾಲಿನಲ್ಲಿ ಒಟ್ಟಿಗೆ ಕುಳಿತಿರುವುದು ಅತ್ಯಂತ ಗಮನಾರ್ಹವಾಗಿದೆ. ಈ ಮೂಲಕ ಕಳೆದ 75 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿದ್ದ ದ್ರಾವಿಡ ಪಕ್ಷಗಳ ಆಧಿಪತ್ಯಕ್ಕೆ ಮುಕ್ತಾಯ ಹಾಡಿ, ಎರಡೂ ಪಕ್ಷಗಳನ್ನು ಒಂದೇ ಸಾಲಿನಲ್ಲಿ ತಂದು ನಿಲ್ಲಿಸುವಂತೆ ವಿಜಯ್ ಮಾಡಿದ್ದಾರೆ ಎಂದು 'ತಮಿಳಗ ವೆಟ್ರಿ ಕಳಗಂ' ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹೇಳುವ ಮೂಲಕ ಸಂಭ್ರಮಿಸಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ನಟ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಮೊದಲ ವಿಧಾನಸಭೆ ಅಧಿವೇಶನ ಯಾವ ಮಹತ್ವ ಹೊಂದಿದೆ?
ಇದು ಹೊಸ ಆಡಳಿತಾತ್ಮಕ ಅಧ್ಯಾಯವನ್ನು ಆರಂಭಿಸಿದ ಚೊಚ್ಚಲ ವಿಧಾನಸಭೆ ಅಧಿವೇಶನ. ಮೊದಲ ದಿನ ಯಾವುದೇ ದೊಡ್ಡ ಗದ್ದಲಗಳಿಲ್ಲದೆ ಶಾಂತಿಯುತ ವಾತಾವರಣದಲ್ಲಿ ಆರಂಭಗೊಂಡಿರುವುದು ಗಮನ ಸೆಳೆದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+