ಹೀರೋಗಳನ್ನೂ ಮೀರಿಸುವ ಲುಕ್; ನಟ ರಾಮ್ ಚರಣ್ ಪರ್ಸನಲ್ ಬಾಡಿಗಾರ್ಡ್‌ನ ದಿನದ ಸಂಬಳ, ಆತನ ಅಸಲಿ ಕಥೆ ಇಲ್ಲಿದೆ
ನಟ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ 'ಪೆದ್ದಿ' (Peddi) ಸಿನಿಮಾದ ಪ್ರಮೋಷನ್ ದೇಶಾದ್ಯಂತ ಜೋರಾಗಿ ನಡೆಯುತ್ತಿದೆ. ಸಿನಿಮಾ ಮೇಲಿನ ನಿರೀಕ್ಷೆ ಒಂದು ಕಡೆಯಾದರೆ, ಸದ್ಯ ಪ್ರಚಾರದ ವೇಳೆ ರಾಮ್ ಚರಣ್ ಜೊತೆಗಿರುವ ಅವರ ಪರ್ಸನಲ್ ಬಾಡಿಗಾರ್ಡ್ ಕೆವಿನ್ ಕುಂಟಾ (Kevin Kunta) ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇಂಟರ್ನೆಟ್‌ನಲ್ಲಿ ಈಗ ರಾಮ್ ಚರಣ್ ಅಭಿಮಾನಿಗಳು ಈ ಬಾಡಿಗಾರ್ಡ್‌ನ ಸ್ಟೈಲ್ ಮತ್ತು ಲುಕ್‌ಗೆ ಫಿದಾ ಆಗಿದ್ದಾರೆ. ಇವರ ಸಂಭಾವನೆ ಕೂಡ ಚರ್ಚೆಯ ವಿಷಯವಾಗಿದೆ.
ಇತ್ತೀಚೆಗೆ ಮುಂಬೈ, ಭೋಪಾಲ್ ಹಾಗೂ ಬೆಂಗಳೂರಿನಲ್ಲಿ ಪೆದ್ದಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಾಮ್ ಚರಣ್ ಸುತ್ತುವರಿದಿದ್ದ ಭಾರಿ ಜನಸ್ತೋಮವನ್ನು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸಿದ ಕೆವಿನ್ ಕುಂಟಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದರ ಬೆನ್ನಲ್ಲೇ ಈ ಬಾಡಿಗಾರ್ಡ್ ಯಾರು? ಆತನ ಹಿನ್ನೆಲೆ ಏನು ಎಂದು ಜನ ಕೆದಕುತ್ತಿದ್ದಾರೆ.

ಯಾರು ಈ ಕೆವಿನ್ ಕುಂಟಾ?
ಆಫ್ರಿಕಾದ ಗ್ಯಾಂಬಿಯಾ ಮೂಲದವರಾದ ಕೆವಿನ್ ಕುಂಟಾ, ವೃತ್ತಿಪರ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ಫೈಟರ್ ಆಗಿದ್ದಾರೆ. ಪ್ರಸ್ತುತ ಇಟಲಿಯ ಫ್ಲಾರೆನ್ಸ್‌ನಲ್ಲಿ ನೆಲೆಸಿರುವ ಇವರು, 2021ರಲ್ಲಿ ಇಟಲಿಯ ರಾಷ್ಟ್ರೀಯ ಎಂಎಂಎ ತಂಡವನ್ನು ಪ್ರತಿನಿಧಿಸಿದ್ದರು. ಇವರು ಇಟಲಿಯ ಪ್ರಸಿದ್ಧ 'ಕೊಲೋಸಿಯಮ್ ಚಾಂಪಿಯನ್ ಬೆಲ್ಟ್ ಎಂಎಂಎ' ಚಾಂಪಿಯನ್ ಕೂಡ ಹೌದು. ತನ್ನ ಫಿಟ್‌ನೆಸ್‌ಗೆ ಸಂಬಂಧಿಸಿದ ವಿಡಿಯೋಗಳ ಮೂಲಕ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.
'ಮೋಸ್ಟ್ ಸ್ಟೈಲಿಶ್ ಬಾಡಿಗಾರ್ಡ್' ಎಂದು ಕರೆದ ನೆಟ್ಟಿಗರು
ಕೆವಿನ್ ಕುಂಟಾ ಅವರ ಕಟ್ಟುಮಸ್ತಾದ ದೇಹದಾರ್ಢ್ಯ, ಆತ್ಮವಿಶ್ವಾಸದ ನಡಿಗೆ ಹಾಗೂ ಡ್ರೆಸ್ಸಿಂಗ್ ಸೆನ್ಸ್ ನೆಟ್ಟಿಗರ ಮನಗೆದ್ದಿದೆ. ಸದಾ ಕಪ್ಪು ಬಣ್ಣದ ವೆಲ್-ಟೈಲರ್ಡ್ ಸೂಟ್‌ಗಳು ಹಾಗೂ ದುಬಾರಿ ಐಷಾರಾಮಿ ಕೈಗಡಿಯಾರಗಳನ್ನು ಧರಿಸಿ ಹದ್ದಿನ ಕಣ್ಣಿಟ್ಟು ನಟನನ್ನು ಕಾಯುವ ಇವರನ್ನು ಕೆಲವರು "ಸಿನಿಮಾದ ವಿಲನ್ ತರಹ ಇದ್ದಾರೆ" ಎಂದರೆ, ಇನ್ನು ಕೆಲವರು "ಹೀರೋ ಆಗುವ ಎಲ್ಲ ಲಕ್ಷಣಗಳಿವೆ" ಎಂದು ಹೊಗಳುತ್ತಿದ್ದಾರೆ. ಭಾರತೀಯ ಸೆಲೆಬ್ರಿಟಿಗಳ ಭದ್ರತಾ ಸಿಬ್ಬಂದಿಗಳಲ್ಲೇ ಇವರು 'ಮೋಸ್ಟ್ ಸ್ಟೈಲಿಶ್ ಬಾಡಿಗಾರ್ಡ್' ಎಂಬ ಹೆಗ್ಗಳಿಕೆಗೂ ಕೆವಿನ್ ಪಾತ್ರರಾಗಿದ್ದಾರೆ.
ದಿನದ ಸಂಭಾವನೆ ಎಷ್ಟು?
ಮೂಲಗಳ ಪ್ರಕಾರ, ರಾಮ್ ಚರಣ್ ಅವರ ಭದ್ರತೆಯ ಜವಾಬ್ದಾರಿ ಹೊತ್ತಿರುವ ಕೆವಿನ್ ಕುಂಟಾ ಅವರಿಗೆ ದಿನವೊಂದಕ್ಕೆ ಬರೋಬ್ಬರಿ 2ರಿಂದ 4 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಬಾಡಿಗಾರ್ಡ್‌ಗಳ ಪೈಕಿ ಇವರು ಒಬ್ಬರಾಗಿದ್ದಾರೆ.
ಬುಚ್ಚಿ ಬಾಬು ಸನಾ ಕಥೆ ಬರೆದು ನಿರ್ದೇಶಿಸುತ್ತಿರುವ 'ಪೆದ್ದಿ' ಚಿತ್ರವು 1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಹಿನ್ನೆಲೆಯುಳ್ಳ ಕಥೆಯಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಕುಸ್ತಿಪಟುವಿನ (Wrestler) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರಕ್ಕಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಠಿಣ ದೈಹಿಕ ತರಬೇತಿ ಪಡೆದು ಅದ್ದೂರಿ ಬದಲಾವಣೆ ಮಾಡಿಕೊಂಡಿದ್ದಾರೆ. ರಾಮ್ ಚರಣ್ ಜೊತೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಮತ್ತು ಬೊಮನ್ ಇರಾನಿ ನಟಿಸಿದ್ದಾರೆ.
ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನವಿದ್ದು, ವೃದ್ಧಿ ಸಿನಿಮಾಸ್ ಈ ಚಿತ್ರವನ್ನು ನಿರ್ಮಿಸಿದೆ. ಮೈತ್ರಿ ಮೂವಿ ಮೇಕರ್ಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ. ಆರ್‌ಆರ್‌ಆರ್ (RRR) ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಮ್ ಚರಣ್ ಅವರ ಮುಂದಿನ ದೊಡ್ಡ ಸಿನಿಮಾ ಆಗಿರುವ 'ಪೆದ್ದಿ' ಇದೇ ಜೂನ್ 4ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.













Click it and Unblock the Notifications