ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು ಫುಲ್ ರಶ್: ಸಾಮಾನ್ಯ ಬೋಗಿಗಳ ಕೊರತೆ, ಪ್ರಯಾಣಿಕರ ಪರದಾಟ
ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ (ಟ್ರೈನ್ ಸಂಖ್ಯೆ- 17377/78) ರೈಲಿನಲ್ಲಿ ಪ್ರಯಾಣಿಸುವ ಕಾಯ್ದಿರಿಸಿದ ಮತ್ತು ಎಸಿ ಬೋಗಿಯ ಪ್ರಯಾಣಿಕರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ. ರೈಲಿನಲ್ಲಿ ಜನರಲ್ ಬೋಗಿಗಳ ಕೊರತೆ ಇರುವುದರಿಂದ, ಕಾಯ್ದಿರಿಸದ ಟಿಕೆಟ್ ಪಡೆದ ಪ್ರಯಾಣಿಕರು ನೇರವಾಗಿ ಎಸಿ ಮತ್ತು ಸ್ಲೀಪರ್ ಕೋಚ್‌ಗಳಿಗೆ ನುಗ್ಗುತ್ತಿದ್ದು, ಇದರಿಂದ ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಮಂಗಳೂರನ್ನು ಬೆಸೆಯುವ ಏಕೈಕ ಪ್ರಮುಖ ರೈಲು ಇದಾಗಿದ್ದು, ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನೈರುತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ವಿಜಯಪುರ ಮತ್ತು ಅರಸೀಕೆರೆ ನಡುವಿನ 21 ನಿಲ್ದಾಣಗಳಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಕಾಯ್ದಿರಿಸದ ಪ್ರಯಾಣಿಕರು ಈ ರೈಲನ್ನು ಹತ್ತುತ್ತಾರೆ. ಆದರೆ ರೈಲಿನಲ್ಲಿ ಅಗತ್ಯವಿರುವಷ್ಟು ಸಾಮಾನ್ಯ ಬೋಗಿಗಳಿಲ್ಲ. ಹೀಗಾಗಿ, ಜಾಗದ ಕೊರತೆಯಿಂದಾಗಿ ಈ ಪ್ರಯಾಣಿಕರು ಇಂಟರ್‌ಲಿಂಕಿಂಗ್ ಬಾಗಿಲುಗಳ ಮೂಲಕ ಎಸಿ ಮತ್ತು ರಿಸರ್ವ್‌ಡ್ ಕೋಚ್‌ಗಳಿಗೆ ಪ್ರವೇಶಿಸುತ್ತಿದ್ದಾರೆ.
ಇದರಿಂದಾಗಿ ಸಾವಿರಾರು ರೂಪಾಯಿ ಕೊಟ್ಟು, ತಿಂಗಳುಗಳ ಹಿಂದೆಯೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಸುರಕ್ಷತೆಗೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಭಾರಿ ಧಕ್ಕೆಯಾಗುತ್ತಿದೆ. ಕಾರಿಡಾರ್‌ಗಳಲ್ಲಿ, ಶೌಚಾಲಯದ ಬಳಿ ಜನರು ಕಿಕ್ಕಿರಿದು ತುಂಬಿರುವುದರಿಂದ, ಕಾಯ್ದಿರಿಸಿದ ಪ್ರಯಾಣಿಕರಿಗೆ ಶೌಚಾಲಯಕ್ಕೆ ಹೋಗಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಜೊತೆ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿರುವ ವಿಜಯಪುರದ ಲೇಖಕಿ ಶಶಿರೇಖಾ ವಿರಕ್ತಮಠ, ಇತ್ತೀಚೆಗೆ ತಾವು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುವಾಗ ಇಡೀ ರಾತ್ರಿ ಈ ಸಮಸ್ಯೆಯನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. "ವೃದ್ಧರು, ಮಹಿಳೆಯರು ಮತ್ತು ಲಗೇಜ್ ಹೊಂದಿರುವ ಮಕ್ಕಳೂ ಸೇರಿದಂತೆ ಕಾಯ್ದಿರಿಸದ ಪ್ರಯಾಣಿಕರ ವಿರುದ್ಧ ನಾವಿಲ್ಲ. ಅವರ ಬಗ್ಗೆ ನಮಗೆ ಅನುಕಂಪವಿದೆ. ಆದರೆ, ಭದ್ರತಾ ಕಾಳಜಿ, ಅಸ್ವಸ್ಥತೆ ಮತ್ತು ಶೌಚಾಲಯಗಳನ್ನು ತಲುಪಲು ಕಷ್ಟಪಡುವಂತಹ ಪರಿಸ್ಥಿತಿ ಇದ್ದರೆ, ನಾವು ಮುಂಗಡವಾಗಿ ಹಣ ನೀಡಿ ಟಿಕೆಟ್ ಬುಕಿಂಗ್ ಮಾಡುವುದಕ್ಕೆ ಏನು ಬೆಲೆ ಇದೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ, ರೈಲ್ವೆ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಉತ್ತರ ಕರ್ನಾಟಕದಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುವುದರಿಂದ, ತಕ್ಷಣವೇ ಈ ರೈಲಿಗೆ ಹೆಚ್ಚುವರಿ ಜನರಲ್ ಬೋಗಿಗಳನ್ನು ಅಳವಡಿಸಬೇಕು. ಇದರಿಂದ ಬಡ ಮತ್ತು ಸಾಮಾನ್ಯ ವರ್ಗದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಹಾಗೂ ಹಣ ನೀಡಿ ಎಸಿ ಬೋಗಿಗಳಲ್ಲಿ ಪ್ರಯಾಣಿಸುವವರಿಗೂ ನೆಮ್ಮದಿಯ ಪ್ರಯಾಣ ಒದಗಿಸಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಜೊತೆಗೆ, ರೈಲ್ವೆ ಭದ್ರತಾ ಪಡೆ (RPF) ಹಾಗೂ ಟಿಕೆಟ್ ತಪಾಸಣಾ ಸಿಬ್ಬಂದಿಗಳು (TTE) ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಕಾಯ್ದಿರಿಸಿದ ಬೋಗಿಗಳಿಗೆ ಇತರರು ಪ್ರವೇಶಿಸದಂತೆ ನಿಗಾವಹಿಸಬೇಕಿದೆ.












Click it and Unblock the Notifications