ವಿದ್ಯಾಕಾಶಿ ಧಾರವಾಡದಲ್ಲಿನ ಮತಗಟ್ಟೆಗಳ ವಿವರ
ಧಾರವಾಡ, ಮೇ, 09: ವಿಧಾನಸಭಾ ಚುನಾವಣೆಗೆ ವಿದ್ಯಾಕಾಶಿ ಧಾರವಾಡ ಸಜ್ಜಾಗಿದ್ದು, ನಾಳೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಆರಂಭವಾಗಿದೆ. ಧಾರವಾಡ ಬಾಸೆಲ್ ಮಶಿನ್ ಕೇಂದ್ರದಿಂದ ಇವಿಎಂ ಯಂತ್ರಗಳ ಮಸ್ಟರಿಂಗ್ ಮಾಡಲಾಗುತ್ತಿದೆ. ಚುನಾವಣಾ ಸಿಬ್ಬಂದಿ ತಮಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ.
ಧಾರವಾಡದ ಬಾಸೆಲ್ ಮಿಶನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಅವರು ಚುನಾವಣಾ ಕಾರ್ಯವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 15.20 ಲಕ್ಷ ಮತಗಳಿವೆ. ಅದರ ಪ್ರಕಾರ 1,642 ಮತಗಟ್ಟೆಗಳನ್ನು ಸಿದ್ಧಪಡಿಸಿ ತಯಾರಿ ಮಾಡಿಕೊಳ್ಳಲಾಗಿದೆ.

ಮತಗಟ್ಟೆಗಳ ಸುತ್ತ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಜಿಲ್ಲೆಗೆ ಕೇಂದ್ರದ 22 ಭದ್ರತಾ ಪಡೆಯ ತುಕಡಿಗಳು ಬಂದಿವೆ. ಇದರೊಂದಿಗೆ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು.
ಒಟ್ಟಾರೆ ಧಾರವಾಡದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಾಳೆ ಮತದಾನ ನಡೆದು, ಸಂಜೆ ಎಲ್ಲಾ ಅಭ್ಯರ್ಥಿಗಳ ಹಣೆಬರಹ ಸ್ಟ್ರಾಂಗ್ ರೂಮ್ ಸೇರಲಿದೆ.
ವಿಶೇಷ ಮತಗಟ್ಟೆಗಳ ಸ್ಥಾಪನೆ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ, ಮೇ 10 ರಂದು ಜರುಗುವ ಮತದಾನ ಹೆಚ್ಚಳಕ್ಕೆ ಭಾರತ ಚುನಾವಣಾ ಆಯೋಗದ ನಿರ್ದೇಶನದಲ್ಲಿ ಧಾರವಾಡ ಜಿಲ್ಲಾ ಆಡಳಿತವು ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿ ಆಯ್ದ ಮತಗಟ್ಟೆಗಳನ್ನು ವಿಶೇಷವಾಗಿ ರೂಪಿಸಲು ಕ್ರಮ ಕೈಗೊಂಡಿದೆ.
ಜಿಲ್ಲೆಯಲ್ಲಿ ಮಹಿಳಾ ಸ್ನೇಹಿಯಾದ 14 ಸಖಿ, ವಿಕಲಚೇತನರನ್ನು ಪ್ರೇರೆಪಿಸುವ 7 ಪಿಡಬ್ಲ್ಯೂಡಿ ಮತಗಟ್ಟೆ, ಯುವಕರನ್ನು ಆಕರ್ಷಿಸುವ 7 ಯುವ ಮತಗಟ್ಟೆ ಮತ್ತು ಸಾಂಪ್ರದಾಯಿಕತೆಯನ್ನು ಸಾರುವ 6 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿವರಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ, ಆಯಾ ಚುನಾವಣಾಧಿಕಾರಿಗಳು ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈ ವಿಶೇಷ ಮತಗಟ್ಟೆಗಳನ್ನು ಜಿಲ್ಲಾ ಸ್ವೀಪ್ ಸಮಿತಿಯ ಮಾರ್ಗದರ್ಶನ ಮತ್ತು ತಾಲೂಕಾ ಪಂಚಾಯತ್‍ಗಳ ಸಹಕಾರದಲ್ಲಿ ಸ್ಥಾಪಿಸಲಾಗುತ್ತಿದೆ. ಕಳೆದ ಚುನವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗಮನಲ್ಲಿಟ್ಟುಕೊಂಡು ಮತ್ತು ಮತದಾರರಲ್ಲಿ ವಿಶೇಷ ಆಸಕ್ತಿ ಹಾಗೂ ಗಮನ ಸೆಳೆಯಲು ಈ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿವೆ.
ಇಂಗಳಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ರೂಮ ನಂ.01 ರಲ್ಲಿನ ಮತಗಟ್ಟೆ ನಂ.161 ರಲ್ಲಿ (ಪಿಡಬ್ಲೂಡಿ) ವಿಕಲಚೇತನರ ಮತಗಟ್ಟೆಯನ್ನು ಮತ್ತು ಬೆಳಹಾರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.116ರಲ್ಲಿ ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದೆ. ನಲವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ನಂ.206 ಮತ್ತು ಶಲವಡಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿನ ಮತಗಟ್ಟೆ ನಂ.37ರಲ್ಲಿ ಸಾಂಪ್ರದಾಯಿಕ (ಎಥ್ನಿಕ್) ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.












Click it and Unblock the Notifications