ಪ್ರಚೋದನಕಾರಿ ಹೇಳಿಕೆ ಆರೋಪ: ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಹೆಚ್ಚಿದ ಆಗ್ರಹ
ಹುಬ್ಬಳ್ಳಿ, ಸೆಪ್ಟೆಂಬರ್ 22:ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಅನ್ಯ ಧರ್ಮಗಳ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಅವರ ಕಾರ್ಯಕರ್ತರನ್ನು ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರಿಗೆ ದೂರು ನೀಡಿದ್ದಾರೆ.

ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದ ಗಣೇಶ ವಿಸರ್ಜನೆಗೆ ಪ್ರಮೋದ್ ಮುತಾಲಿಕ್ ಮೈದಾನಕ್ಕೆ ಭೇಟಿ ನೀಡಿ, ಗಣೇಶ ದರ್ಶನ ಪಡೆದುಕೊಂಡಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಮಾಡಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು. ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ದೇಶ ವಿಭಜನೆ ಮಾಡಿದ ದ್ರೋಹಿಗಳು. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ.ನಿಮ್ಮ ನಮಾಜ್‌ಗೂ ನಾವು ಅಡ್ಡಿಪಡಿಸಬೇಕಾಗುತ್ತದೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್‌ಗೆ ಅವಕಾಶ ಕೊಡದಂತೆ ಕೋರ್ಟ್‌ಗೆ ಹೋಗುತ್ತೇವೆ. ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ, ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಮೂರು ದಿನ ಯಾವುದೇ ಗೊಂದಲ್ಲ ಇಲ್ಲದೇ ಗಣೇಶ ಪ್ರತಿಷ್ಠಾಪನೆಯಾಗಿದೆ. ಹಿಂದೂ ಸಮಾಜ ಶಾಂತಿಯಿಂದ ಆಚರಣೆ ಮಾಡಿದೆ. ಸದ್ಯ ಈದ್ಗಾ ಮೈದಾನ ಶುದ್ದಿಯಾಗಿದೆ. ಗಣೇಶ ಉತ್ಸವಕ್ಕೆ ವಿರೋಧಿ ಮಾಡಿದವರು ದೇಶ ವಿರೋಧಿಗಳು, ಅಧರ್ಮಿಯರು. ನಾವು ಅದನ್ನು ಮೆಟ್ಟಿ ನಿಂತು ಆಚರಣೆ ಮಾಡಿದ್ದೇವೆ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಪ್ರತಿಕ್ರಿಯೆ ನೀಡಿದ್ದು, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕಲಂ 153(ಎ), 295(ಎ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮಹಾನಗರ ಪಾಲಿಕೆ 8 ವಲಯದ ಸಹಾಯ ಆಯುಕ್ತ ಚಂದ್ರಶೇಖರಗೌಡ ಎಂಬುವವರು ದೂರು ನೀಡಿದ್ದಾರೆ.ನಾನು ಸಹ ಗಡಿಪಾರು ಸಲುವಾಗಿ ಚಿಂತನೆ ನಡೆಸಿದ್ದೇವೆ ಎಂದರು.
ಪ್ರಮೋದ್ ಮುತಾಲಿಕ್ ವಿರುದ್ಧ ದೂರು ನೀಡಿದ ಬಳಿಕ ಮುಸ್ಲಿಂ ಸಮುದಾಯದ ನಾಯಕ ಅಸ್ಪಾಕ್ ಕುಮಾಟಕರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೂಡಲೇ ಮುತಾಲಿಕ್ ಮತ್ತು ಅವರ ಸಂಗಡಿಗರಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.












Click it and Unblock the Notifications