Microfinance: ಮೈಕ್ರೋ ಫೈನಾನ್ಸ್ ವಿರುದ್ಧ ಧಾರವಾಡ ಜಿಲ್ಲಾಡಳಿತದ ಸಮರ ಶುರು
ಧಾರವಾಡ, ಜನವರಿ 31: ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹೀರವಾಗಿ ನಡೆದುಕೊಂಡಲ್ಲಿ ತಕ್ಷಣ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಧಾರವಾಡದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಜಿಲ್ಲಾಡಳಿತ ಸಮರ ಆರಂಭವಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಆಗುತ್ತಿರುವ ಕಿರಕುಳ ಹಿನ್ನಲೆಯಲ್ಲಿ ಮೈಕ್ರೊಫೈನಾನ್ಸ್, ಫೈನಾನ್ಸ್ ಕಾರ್ಪರೇಷನ್, ಲೇವಾದೇವಿಗಾರರು, ಗಿರವಿದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಮೈಕ್ರೊ ಫೈನಾನ್ಸ್‍ಗಳು ಭಾರತೀಯ ರೀಜರ್ವ್ ಬ್ಯಾಂಕ್ ನಿಯಮದ ಪ್ರಕಾರ ವ್ಯವಹಾರ ನಡೆಸಬೇಕು. ಸಾಲದ ಕಾರಣಕ್ಕೆ ಜೀವ ಹಾನಿ ಆಗಬಾರದು. ನಿರ್ದಿಷ್ಟ ಪಡಿಸಿರುವ ನಿಯಮಗಳ ಚೌಕಟ್ಟಿನಲ್ಲಿ ಸಾಲ ವಸೂಲಾತಿ ಆಗಬೇಕು ಹೊರತು, ಯಾವುದೇ ರೀತಿಯಲ್ಲಿ ಸಾಲಗಾರರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರು ಬಂದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಣೆ ಮಾಡಬೇಕು. ನಿಯಮ ಮೀರಿ ಸಾಲ ನೀಡಿ ಬಳಿಕ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಅದಕ್ಕೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಎಂದು ತಿಳಿಸಿದರು.
ಸಾಲ ಪಡೆಯುವ ವ್ಯಕ್ತಿಗೆ ಸಾಲ ಎಷ್ಟು, ಬಡ್ಡಿದರ, ಕಂತುಗಳು, ವಸೂಲಿ ಸ್ಥಳ, ವಸೂಲುಗಾರ ಯಾರು, ಮುಂತಾದ ವಿವರ ಇರುವ ಕಾರ್ಡ್ ನೀಡಬೇಕು. ಇನ್ನು ಸಂಸ್ಥೆಯ ಕಚೇರಿಯಲ್ಲಿ ಅಥವಾ ವ್ಯವಹಾರದ ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಮೈಕ್ರೊ ಫೈನಾನ್ಸ್ ಆರ್ಥಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ಫಲಕವನ್ನು ಸಾರ್ವಜನಿಕರಿಗೆ ಅಥವಾ ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೈಕ್ರೊ ಫೈನಾನ್ಸ್ ಸಾಲ ವಸೂಲು ಮಾಡುವವರು ಸಾಲಗಾರರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳುವದನ್ನು ಕಲಿಯಬೇಕು. ಕೇವಲ ವ್ಯಾಪಾರದ ದೃಷ್ಠಿಯಿಂದ ನಡೆದುಕೊಂಡಿದ್ದು ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೊಮೋಟೋ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದುಸ ಎಚ್ಚರಿಕೆ ನೀಡಿದರು.

ವಿವಿಧ ಹಣಕಾಸು ಸಂಸ್ಥೆಗಳು ಸಾಲ ಕೊಟ್ಟ ಮೇಲೆ ಹೇಗೆ ವಸೂಲಾತಿ ಮಾಡಬೇಕೆಂಬುವುದರ ಬಗ್ಗೆ ನಿಯಮಗಳಿವೆ. ವಸೂಲಾತಿ ಮಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ತೊಂದರೆ ನೀಡಿದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ. ಗ್ರಾಹಕರ ಜೊತೆ ವಿನಯದಿಂದ ನಡೆದುಕೊಳ್ಳಬೇಕು. ಸಾಲ ವಸೂಲಾತಿಯಲ್ಲಿ ನಿಯಮ ಬಾಹೀರವಾಗಿ ಕ್ರಮವಹಿಸಿರುವ ಬಗ್ಗೆ ಈಗಾಗಲೇ ಮಹಾನಗರದಲ್ಲಿ ಒಂದು ಮತ್ತು ಜಿಲ್ಲಾ ಗ್ರಾಮೀಣದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ
ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸೇರಿದಂತೆ ಇತರೆ ಯಾವುದೇ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಅಥವಾ ಟೋಲ್ ಪ್ರೀ ನಂಬರಗೆ ಕರೆ ಮಾಡಿ, ಮಾಹಿತಿ ನೀಡಬಹುದು ಅಥವಾ ದೂರು ನಿವಾರಣಾ ಕೇಂದ್ರಕ್ಕೆ ಖುದ್ದಾಗಿ ಬಂದು ದಾಖಲೆಗಳೊಂದಿಗೆ ದೂರು ನೀಡಬಹುದು. ಮಾಹಿತಿದಾರರು ಬಯಸಿದ್ದಲ್ಲಿ ಅವರ ವಿವರಗಳನ್ನು ಗೌಪ್ಯವಾಗಿಟ್ಟು ಸಂಬಂಧಿಸಿದ ಮೈಕ್ರೊ ಫೈನಾನ್ಸ್, ಇತರ ಹಣಕಾಸು ಸಂಸ್ಥೆಗಳ ವಿರುದ್ಧ ಸರಕಾರಿ ಕಾನೂನುಗಳ ಪ್ರಕಾರ ಪೊಲೀಸ್ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಮೈಕ್ರೋ ಫೈನಾನ್ಸ್ ವಿರುದ್ಧ ಜಿಲ್ಲಾಡಳಿತ ಈಗಾಗಲೇ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದರು.












Click it and Unblock the Notifications