ಧಾರವಾಡ; ಓಮಿಕ್ರಾನ್ ದೃಢಪಟ್ಟ ಮಹಿಳೆ ಸಂಪೂರ್ಣ ಗುಣಮುಖ
ಧಾರವಾಡ, ಡಿಸೆಂಬರ್ 21; ಕರ್ನಾಟಕದಲ್ಲಿ ಸೋಮವಾರ ಕೋವಿಡ್ ರೂಪಾಂತರಿ ಓಮಿಕ್ರಾನ್ 5 ಹೊಸ ಹೊಸ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಧಾರವಾಡ ಜಿಲ್ಲೆಯ 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. "ಓರ್ವ ಮಹಿಳೆಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಅಗತ್ಯ ಚಿಕಿತ್ಸೆ, ಔಷಧಿ ಪಡೆದುಕೊಂಡು ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ಸೋಂಕಿತ ಮಹಿಳೆಯು ಕಳೆದ ಡಿಸೆಂಬರ್ 4ರಂದು ಜ್ವರದ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಡಿಸೆಂಬರ್ 5ಕ್ಕೆ ಪಾಸಿಟಿವ್ ವರದಿ ಬಂದಿತ್ತು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಂತರ ಅವರ ಗಂಟಲು ದ್ರವವನ್ನು ಜಿನೋಮ ಸ್ವಿಕೆನ್ಸಿಂಗ್‌ಗೆ ಕಳುಹಿಸಲಾಗಿತ್ತು" ಎಂದರು.

"ಅದರ ವರದು ಸಹ ಪಾಸಿಟಿವ್ ಬಂದಿದೆ. ನಿಯಮಾನುಸಾರ ಎಲ್ಲ ಮುಂಜಾಗೃತೆ ವಹಿಸಿ ಸೋಂಕಿತ ಮಹಿಳೆಗೆ ಅಗತ್ಯ ಚಿಕಿತ್ಸೆ, ಔಷಧಿ ಮತ್ತು ಆರೋಗ್ಯ ಸಲಹೆ ನೀಡಿರುವುದರಿಂದ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ" ಎಂದರು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್ ಬಂದಿದ್ದ ಮಹಿಳೆಗೆ ಕಳೆದ 2 ದಿನಗಳಲ್ಲಿ 2 ಬಾರಿ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಭಾನುವಾರ ಒಂದು ಮತ್ತು ಸೋಮವಾರ ಬೆಳಗ್ಗೆ ಒಂದು ನೆಗೆಟಿವ್ ವರದಿ ಬಂದಿವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮತ್ತು ಸೊಂಕಿತರ ಪ್ರಥಮ ಸಂಪರ್ಕದ 4 ಜನ ಹಾಗೂ ದ್ವಿತೀಯ ಸಂಪರ್ಕದ 133 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಕಚೇರಿಗೆ ರಜೆ ನೀಡಲಾಗಿದೆ; ಸೋಂಕಿತ ಮಹಿಳೆಯ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಮುಂಜಾಗೃತೆ ವಹಿಸಲಾಗಿದೆ. ಕಚೇರಿಗೆ ರಜೆ ನೀಡಲಾಗಿದೆ, ಸೋಂಕಿತ ಮಹಿಳೆಯು ಕೋವಿಡ್ ಮಾರ್ಗಸೂಚಿಗಳ ಪ್ರಕಾರ 10 ಮತ್ತು 7 ಸೇರಿ ಒಟ್ಟು 17 ದಿನ ಹೋಮ್ ಐಸೋಲೇಷನ್ ಆಗಿದ್ದು, ಇನ್ನು ಒಂದು ವಾರ ಹೋಂ ಐಸೋಲೇಷನ್‍ದಲ್ಲಿ ಇರುವಂತೆ ಸಲಹೆ ನೀಡಲಾಗಿದೆ.
ಓಮಿಕ್ರಾನ್ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖವಾಗಿರುವುದರಿಂದ ಸಾರ್ವಜನಿಕರು ಯಾವುದೇ ಭಯ, ಆತಂಕಗಳಿಗೆ ಒಳಗಾಗದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.
ಕೋವಿಡ್ ಲಸಿಕಾಕರಣ; "ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣಕ್ಕೆ 14 ಲಕ್ಷ 44 ಸಾವಿರ ಗುರಿ ಹೊಂದಲಾಗಿತ್ತು. ಅದರಲ್ಲಿ ಡಿಸೆಂಬರ್ 19ರ ತನಕ ಮೊದಲ ಡೋಸ್ ಅನ್ನು 14,15,052 ಜನರಿಗೆ ನೀಡಲಾಗಿದ್ದು, ಶೇ.98ರಷ್ಟು ಸಾಧನೆಯಾಗಿದೆ. ಮತ್ತು 2ನೇ ಡೋಸ್‍ನ್ನು 10,23,851 ಜನರಿಗೆ ನೀಡಲಾಗಿದ್ದು, ಶೇ.70.90 ರಷ್ಟು ಗುರಿ ಸಾಧಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ನವೆಂಬರ್ 23ರ ಎಸ್‍ಡಿಎಂ ಕ್ಲಸ್ಟರ್‌ಗಿಂತ ಪೂರ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ 0.0 ಆಗಿತ್ತು. ನಂತರದಲ್ಲಿ ದಿನಕ್ಕೆ ಎರಡ್ಮೂರು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗ 0.12 ಕೋವಿಡ್ ಪಾಸಿಟಿವಿಟಿ ದರ ಜಿಲ್ಲೆಯಲ್ಲಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣವನ್ನು ನಿರಂತರವಾಗಿ ಮುಂದುವರಿಸಲಾಗಿದೆ. ಅಂದಾಜು ಪ್ರತಿದಿನ 3 ರಿಂದ 4 ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ.
ದಂಡ ಪ್ರಯೋಗ; ಧಾರವಾಡ ಜಿಲ್ಲೆಯಲ್ಲಿ ಆರಂಭದಿಂದಲೂ ಕೋವಿಡ್ ಮಾರ್ಗಸೂಚಿಯಲ್ಲಿರುವ ಸುರಕ್ಷತಾ ನಿಯಮಗಳನ್ನು ಪಾಲಿಸದ ಸಾರ್ವಜನಿಕರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗುತ್ತಿದೆ. ಧಾರವಾಡ ಗ್ರಾಮೀಣ ಭಾಗದಲ್ಲಿ ಪೊಲೀಸ್ ಇಲಾಖೆಯಿಂದ ಸಾಮಾಜಿಕ ಅಂತರ ಪಾಲನೆ ಮಾಡದ ಹಾಗೂ ಮಾಸ್ಕ್ ಧರಿಸದ ಪ್ರಕರಣಗಳಲ್ಲಿ 3,09,87,950 ಹಾಗೂ ಮಹಾನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮೀಷನ್‍ರೇಟ್‍ದಿಂದ 1,45,67,700 ಮತ್ತು ಮಹಾನಗರ ಪಾಲಿಕೆಯಿಂದ 6,07,56,900, ನಗರ ಸ್ಥಳೀಯ ಸಂಸ್ಥೆಗಳಿಂದ 3,78,650 ರೂ. ದಂಡ ವಿಧಿಸಲಾಗಿದೆ.
"ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು. ಮತ್ತು ಸಾಮಾಜಿಕ ಅಂತರ ಕಾಪಾಡಬೇಕು. ಅಂದಾಗ ಮಾತ್ರ ಕೋವಿಡ್‍ನಿಂದ ಸ್ವಯಂ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ" ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿದ್ದಾರೆ.












Click it and Unblock the Notifications