SPಗೆ ಅಲ್ಲ, ನಾವ್ ಏನಿದ್ರೂ DGಗೇ ದೂರು ಕೊಡೋದು: ಎಂ.ಪಿ.ರೇಣುಕಾಚಾರ್ಯ ಹೀಗೆ ಗುಡುಗಿದ್ಯಾಕೆ?
ದಾವಣಗೆರೆ, ನವೆಂಬರ್, 21: ನಾನು ಎಸ್ಪಿ ಗಿಸ್ಪಿಗೆ ದೂರು ಕೊಡಲ್ಲ. ಡಿಜಿಗೆ ಹೋಗಿ ಕೇಸ್ ಕೊಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹಾಗೂ ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಗುಡುಗಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠ ಸಮೀಪದ ತನ್ನ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನಲ್ಲಿ ಮಟ್ಕಾ, ಇಸ್ಪೀಟ್ ಅಡ್ಡೆಗಳು ಜಾಸ್ತಿ ಆಗುತ್ತಿವೆ. ಮಹಿಳೆಯರ ಮಾಂಗಲ್ಯ ಸರ ಉಳಿಯುವ ಲಕ್ಷಣ ಗೋಚರಿಸುತ್ತಿಲ್ಲ. ಆದಷ್ಟು ಬೇಗ ಎಸ್ಪಿ ಉಮಾ ಪ್ರಶಾಂತ್ ಅವರು ಕಡಿವಾಣ ಹಾಕಬೇಕು. ಇಲ್ಲದಿದ್ದರೆ, ಎಸ್ಪಿ ಗಿಸ್ಪಿಗೆ ಕಂಪ್ಲೆಂಟ್ ಕೊಡಲ್ಲ. ಸೀದಾ ಡಿಜಿಗೆ ಹೋಗಿ ಕೇಸ್ ಕೊಡುತ್ತೇನೆ ಎಂದು ಹೇಳಿದರು.
ಈ ಹಿಂದೆ ಎಸ್ಪಿ ರಿಷ್ಯಂತ್ ಅವರು ಬಂದಾಗ ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಂಡಾಗ ರೇಣುಕಾಚಾರ್ಯ ಎಸ್ಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಆಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಎಸ್ಪಿ ಅವರು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿದ್ದರು. ಆಗಲೂ ಎಸ್ಪಿ ವಿರುದ್ಧ ಕೆಂಡಕಾರಿದ್ದ ರೇಣುಕಾಚಾರ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಮತ್ತೆ ಈಗ ಎಸ್ಪಿ ಗಿಸ್ಪಿಗೆ ಕೊಡಲ್ಲ, ನಾನು ಡಿಜಿಗೆ ಕೊಡುತ್ತೇನೆ ಎಂದು ಹೇಳುವ ಮೂಲಕ ಎಸ್ಪಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ವಿಚಾರದಲ್ಲಿ ರಾಜಕಾರಣ ಮಾಡುತ್ತೇನೆ. ಬಡವರ ವಿಷಯದಲ್ಲಿ ಮಾಡುವುದಿಲ್ಲ. ಕಡಿಮೆ ದರಕ್ಕೆ ಮರಳು ಸಿಗಬೇಕು. ಇದು ನಮ್ಮ ಉದ್ದೇಶ. ಮಟ್ಕಾ, ಇಸ್ಪೀಟ್ ಅಡ್ಡೆಗಳು ಜಾಸ್ತಿಯಾಗುತ್ತಿವೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಬೇಕು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ವಾ? ಓಸಿ, ಇಸ್ಪೀಟ್ ಇದೇ ರೀತಿಯಲ್ಲಿ ಮುಂದುವರೆದರೆ, ಕಡಿಮೆ ದರಕ್ಕೆ ಮರಳು ಸಿಗದಿದ್ದರೆ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಪಕ್ಷಾತೀತವಾಗಿ ಕಡಿಮೆ ದರಕ್ಕೆ ಮರಳ ಸಿಗುತ್ತಿತ್ತು. ಈಗ 10 ಸಾವಿರಕ್ಕೂ ಒಂದು ಲೋಡ್ ಮರಳು ಸಿಕ್ತಾ ಇಲ್ಲ. ಕಳೆದ 15-20 ದಿನಗಳಿಂದ ಮರಳಿನ ದಂಧೆ ಆರಂಭವಾಗಿದೆ. ಪಕ್ಷಾತೀತವಾಗಿ ಎಲ್ಲರಿಗೂ ಕಡಿಮೆ ದರಕ್ಕೆ ಮರಳ ಸಿಗಬೇಕು. ಮುಕ್ತವಾಗಿ ಕಡಿಮೆ ದರಕ್ಕೆ ಮರಳು ಸಿಗಬೇಕು. ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಎಸಿ ಅವರಿಗೂ ಹೇಳಿದ್ದೇನೆ. ಕಡಿಮೆ ದರ ನಿಗದಿಪಡಿಸುವಂತೆ ಹೇಳಿದ್ದೇನೆ ಎಂದರು.
ವಿನಾಃ ಕಾರಣ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಸೀಜಾದ ಮರಳು ಹೊಸದುರ್ಗಕ್ಕೆ ಕಳುಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ನಾನು ಮೌನವಾಗಿ ಇರೋದು ದೌರ್ಬಲ್ಯ ಅಲ್ಲ. ಮುಕ್ತವಾಗಿ ಪಕ್ಷಾತೀತವಾಗಿ ಬಡವರಿಗೆ ಕಡಿಮೆ ದರಕ್ಕೆ ಮರಳು ಸಿಗಬೇಕು. ಮರಳಿನ ವಿಚಾರವಾಗಿ ಭ್ರಷ್ಟಾಚಾರ ಮಾಡಿದರೆ ಉಗ್ರ ಹೋರಾಟ ಮಾಡುತ್ತೇನೆ. ಹೊನ್ನಾಳಿ ನಗರದಲ್ಲಿ ಓಸಿ, ಇಸ್ಪೀಟ್ ಜಾಸ್ತಿಯಾಗಿದ್ದು, ಪೊಲೀಸರು ಕಡಿವಾಣ ಹಾಕಬೇಕು. ಇಲ್ಲದೇ ಇದ್ದರೇ ಡಿಜಿ ಅವರಿಗೆ ಕಂಪ್ಲೇಂಟ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರು ಸೇರಿದಂತೆ ಇತರರು ಹಾಜರಿದ್ದರು.












Click it and Unblock the Notifications