UPSC Result 2022: ದೇಶದಲ್ಲಿ ಇಶಿತಾ ಕಿಶೋರ್, ರಾಜ್ಯಕ್ಕೆ ದಾವಣಗೆರೆಯ ಅವಿನಾಶ್ ಪ್ರಥಮ, ವಿವರ ಇಲ್ಲಿದೆ
ದಾವಣಗೆರೆ, ಮೇ, 23: 2022ನೇ ಸಾಲಿನ ಯುಪಿಎಸ್‌ಸಿ ಸಿವಿಲ್ಸ್ ಪರೀಕ್ಷೆಯ ಫಲಿತಾಂಶ ಮಂಗಳವಾರ (ಮೇ 23) ಪ್ರಕಟ ಆಗಿದೆ. ದೇಶದಲ್ಲೇ ಇಶಿತಾ ಕಿಶೋರ್ ಮೊದಲ ರ‍್ಯಾಂಕ್ ಪಡೆದರೆ, ಬೆಣ್ಣೆನಗರಿ, ಕರ್ನಾಟಕದ ಮ್ಯಾಂಚೆಸ್ಟರ್ ಅಂತಲೇ ಪ್ರಸಿದ್ಧಿ ಆಗಿರುವ ದಾವಣಗೆರೆಯ ಅವಿನಾಶ್ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ.
ಯುಪಿಎಸ್‌ಸಿ ಸಿವಿಲ್ಸ್ 2022 ಫಲಿತಾಂಶದಲ್ಲಿ ಇಶಿತಾ ಕಿಶೋರ್ ಎಂಬುವವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ, ಈ ಫಲಿತಾಂಶದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಅಲಂಕರಿಸಿರುವುದು ವಿಶೇಷ ಆಗಿದೆ. ಹಾಗಾದರೆ ಮೊದಲ ನಾಲ್ಕು ಸ್ಥಾನಗಳನ್ನು ಅಲಂಕರಿಸಿದ ಮಹಿಳೆಯರ ಪಟ್ಟಿ ಇಲ್ಲಿದೆ ನೋಡಿ

ಮೊದಲ 4 ಸ್ಥಾನಗಳನ್ನು ಅಲಂಕರಿಸಿದ ಮಹಿಳೆಯವರು
1. ಇಶಿತಾ ಕಿಶೋರ್ - ಪ್ರಥಮ ರ‍್ಯಾಂಕ್
2. ಗರಿಮಾ ಲೋಹಿಯಾ - ದ್ವಿತೀಯ ರ‍್ಯಾಂಕ್
3. ಉಮಾ ಹರತಿ - ಮೂರನೇ ರ‍್ಯಾಂಕ್
4. ಸ್ಮೃತಿ ಮಿಶ್ರಾ - ನಾಲ್ಕನೇ ರ‍್ಯಾಂಕ್
ಇನ್ನು ದೇಶದಲ್ಲಿನ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಜ್ಯದಿಂದ 26 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ, ದಾವಣಗೆರೆಯ ಅವಿನಾಶ್ 31ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡದ ಶೃತಿ ಯರಗಟ್ಟಿ 362, ಮೈಸೂರಿನ ಪೂಜಾ 390, ಬಿವಿ ಶ್ರೀದೇವಿ 525, ಆದಿನಾಥ್ ಪದ್ಮಣ್ಣ 566 ರ‍್ಯಾಂಕ್ ಪಡೆದರೆ, ಐ.ಎನ್. ಮೇಘನಾ 617ನೇ ಸ್ಥಾನ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೆ ಮೈಸೂರಿನ ಕುವೆಂಪು ನಗರದ ಪೂಜಾ 390, ಬೆಳವಾಡಿಯ ಭಾನುಪ್ರಕಾಶ್ 448 ನೇ ಸ್ಥಾನ ಪಡೆದಿದ್ದಾರೆ.

ಒಟ್ಟು 933 ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದಲ್ಲಿ 345 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವಲಯದ 99 ಅಭ್ಯರ್ಥಿಗಳು, ಒಬಿಸಿ ವರ್ಗದಲ್ಲಿ 263, ಪರಿಶಿಷ್ಟ ಜಾತಿ ಸಮುದಾಯದ 154 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡದಿಂದ 72 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.
ಅಲ್ಲದೆ ಈ ಪರೀಕ್ಷೆಯ ಮೂಲಕ ಐಎಎಸ್‌ಗೆ 180, ಐಪಿಎಸ್‌ಗೆ 200, ಐಎಫ್‌ಎಸ್‌ಗೆ 38, ಗ್ರೂಪ್ ಎ ಕೇಂದ್ರ ಸೇವೆಗಳಿಗೆ 473 ಮತ್ತು ಗ್ರೂಪ್ ಬಿ ಸೇವೆಗೆ 131 ಜನರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಅದೇ ರೀತಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಪುತ್ರ ಸಿದ್ದಲಿಂಗಪ್ಪ ಪೂಜಾರ ಎಂಬ ವಿದ್ಯಾರ್ಥಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಈ ಮೂಲಕ ಸಿದ್ದಲಿಂಗಪ್ಪ ಪೂಜಾರ ರಾಜ್ಯಕ್ಕೆ ಮತ್ತು ಅಣ್ಣಿಗೇರಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ.
ಸಿದ್ದಲಿಂಗಪ್ಪ ಪೂಜಾರ ಅವರು 589 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದು, ಇವರ ಸಾಧನೆಗೆ ಅಣ್ಣಿಗೇರಿ ಪಟ್ಟಣವೇ ಹೆಮ್ಮೆ ಪಡುವಂತಾಗಿದೆ. ಸಾಮಾನ್ಯವಾಗಿ ಅದೆಷ್ಟೋ ಶ್ರೀಮಂತರ ಮಕ್ಕಳು ಮೋಜು ಮಸ್ತಿ ಮಾಡುತ್ತಲೇ ಜೀವನವನ್ನು ಕಳೆಯುತ್ತಿರುತ್ತಾರೆ. ಆದರೆ ಬಡವರ ಮಕ್ಕಳು ಮಾತ್ರ ತಮ್ಮ ತಂದೆ-ತಾಯಿ ಕಷ್ಟಗಳನ್ನು ಅರ್ಥ ಮಾಡಿಕೊಂಡು ತಾವು ಉನ್ನತ ಸ್ಥಾನಕ್ಕೆ ಏರಬೇಕೆಂದು ಕನಸ್ಸು ಕಾಣುತ್ತಾರೆ.
ಬಡವರ ಮಕ್ಕಳು ಕಂಡ ಕನಸ್ಸನ್ನು ನನಸು ಮಾಡುವವರೆಗೂ ತಮ್ಮ ಹಠವನ್ನು ಬಿಡುವುದಿಲ್ಲ ಎನ್ನುವುದಕ್ಕೆ ಕೆಎಸ್‌ಆರ್‌ಟಿಸಿ ಚಾಲಕನ ಪುತ್ರ ಸಿದ್ದಲಿಂಗಪ್ಪ ಪೂಜಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವುದೇ ಪ್ರಮುಖ ಉದಾಹರಣೆ ಆಗಿದೆ.
ಸಾಧಿಸುವವನಿಗೆ ಪ್ರಮುಖವಾಗಿ ಛಲವೊಂದಿದ್ದರೆ ಸಾಕು. ಅಲ್ಲದೆ ಅವರಿಗೆ ಕಷ್ಟಗಳೆಲ್ಲವೂ ಪಾಠಗಳ ರೀತಿಯಲ್ಲೇ ಕಾಣಿಸುತ್ತವೆ. ಕೊನೆಗೆ ತಾವು ಅಂದುಕೊಂಡಂತೆ ಸಾಧನೆಯನ್ನು ಕೂಡ ಮಾಡಿ ತಂದೆ-ತಾಯಿಗೆ ಹೆಸರು ತರುವುದೇ ಇವರ ಪ್ರಮುಖ ಉದ್ದೇಶ ಆಗಿರುತ್ತದೆ. ಅಷ್ಟೇ ಅಲ್ಲದೆ ಸಾಧಕನಿಗೆ ಪ್ರಮುಖವಾಗಿ ಬಾದಕಗಳ ಬಗ್ಗೆ ಅರಿವಿರುತ್ತದೆ ಅನ್ನುವುದಕ್ಕೆ ಸಿದ್ದಲಿಂಗಪ್ಪ ಪೂಜಾರ ಅವರ ಸಾಧನೆಯೇ ಉದಾಹರಣೆ ಆಗಿದೆ.












Click it and Unblock the Notifications