ದಾವಣಗೆರೆಯಲ್ಲಿ ಮಳೆ ಅಬ್ಬರ: ಗೋಡೆ ಕುಸಿದು ಮಗು ಸಾವು, ಹೆಚ್ಚಿದ ಪ್ರವಾಹ ಭೀತಿ
ದಾವಣಗೆರೆ, ಜುಲೈ 25: ದಾವಣಗೆರೆ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದು ವರ್ಷ ಐದು ತಿಂಗಳ ಹೆಣ್ಣು ಮಗು ಮೃತಪಟ್ಟಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ 5 ಲಕ್ಷ ರೂ ಪರಿಹಾರ ನೀಡಿದರು.
ತುಂಗಾಭದ್ರ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನಲೆಯಲ್ಲಿ ಉಕ್ಕಡಗಾತ್ರಿ, ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅತಿಯಾದ ಮಳೆಯಿಂದಾಗಿ ಹರಿಹರ ತಾಲೂಕಿನ ತಿಮ್ಮಿನಕಟ್ಟೆ ಗ್ರಾಮದಲ್ಲಿ ಕೃಷಿ ಜಮೀನುಗಳು ಜಲಾವೃತ ಗೊಂಡಿದ್ದು ಮಳೆಹಾನಿ ಸ್ಥಳಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಹರಿಹರ ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ, ಮಲೆಬೆನ್ನೂರು ಉಪತಹಶೀಲ್ದಾರ್ ರವಿ, ಹಾಗೂ ದೇವಸ್ಥಾನದ ಸದಸ್ಯರು ಇದ್ದರು.

ದಾವಣಗೆರೆ ಜಿಲ್ಲೆಯ ಮಳೆಯ ವಿವರ
ದಾವಣಗೆರೆ ಜಿಲ್ಲೆಯಲ್ಲಿ 11.4 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 11.38 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
ಚನ್ನಗಿರಿಯಲ್ಲಿ ವಾಡಿಕೆ ಮಳೆ 7.1 ಮಿ.ಮೀ ಹಾಗೂ ವಾಸ್ತವ ಮಳೆ 14.8 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 1.5 ಮಿ.ಮೀ ಹಾಗೂ ವಾಸ್ತವ ಮಳೆ 6.0 ಮಿ.ಮೀ, ಹರಿಹರದಲ್ಲಿ ವಾಡಿಕೆ ಮಳೆ 1.9 ಮಿ.ಮೀ ಹಾಗೂ ವಾಸ್ತವ ಮಳೆ 4.4 ಮಿ.ಮೀ, ಹೊನ್ನಾಳಿ ವಾಡಿಕೆ ಮಳೆ 3.8 ಮಿ.ಮೀ ಹಾಗೂ ವಾಸ್ತವ ಮಳೆ 10.8 ಮಿ.ಮೀ, ಜಗಳೂರು ವಾಡಿಕೆ ಮಳೆ 2.3 ಮಿ.ಮೀ ಹಾಗೂ ವಾಸ್ತವ ಮಳೆ 12.7 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 5.7 ಮಿ.ಮೀ ಹಾಗೂ ವಾಸ್ತವ ಮಳೆ 20.4 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 9 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 2.70 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಪೂರ್ಣ ಹಾನಿಯಾಗಿದ್ದು ರೂ. 2 ಸಾವಿರ ಅಂದಾಜು ನಷ್ಟ ಹಾಗೂ 1 ಮನೆ ಭಾಗಶಃ ಹಾನಿಯಾಗಿದ್ದು ರೂ.0.30 ಸಾವಿರ ಅಂದಾಜು ನಷ್ಟ ಸಂಭವಿಸಿದೆ ಹಾಗೂ 1 ಜೀವಹಾನಿಯಾಗಿದ್ದು, ವಾರಸುದಾರರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.

ಜಗಳೂರು ತಾಲೂಕು ವ್ಯಾಪ್ತಿಯಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 0.13 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು ರೂ. 25 ಸಾವಿರ ಅಂದಾಜು ನಷ್ಟ ಆಗಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ರೂ. 40 ಸಾವಿರ ಅಂದಾಜು ನಷ್ಟವಾಗಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ರೂ. 40 ಸಾವಿರ ಅಂದಾಜು ನಷ್ಟ ಸಂಭವಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 11.38ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.












Click it and Unblock the Notifications