ಲೋಕಸಭಾ ಚುನಾವಣೆ: ಮತದಾನ ಮಾಡಿ..ಸೆಲ್ಫಿ ಕಳುಹಿಸಿ..ಬಹುಮಾನ ಗೆಲ್ಲಿ
ದಾವಣಗೆರೆ, ಮೇ 07: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ 2ನೇ ಹಂತದ ಮತದಾನ ಆರಂಭವಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಮತದಾನ ಮಾಡಿ, ಸೆಲ್ಫಿ ಕಳುಹಿಸಿ ಬಹುಮಾನ ಗೆಲ್ಲಿ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
ಮತದಾನ ಮಾಡಿ ಶಾಹಿ ಹಚ್ಚಿದ ಎಡಗೈ ತೋರು ಬೆರಳು ತೋರಿಸುತ್ತಾ ಕನಿಷ್ಠ 20 ಜನರು ಗರಿಷ್ಠ 100 ಜನರು ಸೇರಿ ಸೆಲ್ಫಿ ತೆಗೆದು 9731016999 ನಂಬರ್‌ಗೆ ಕಳುಹಿಸಿ ಬಹುಮಾನ ಪಡೆಯಬಹುದು ಎಂದು ದಾವಣಗೆರೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್.ಬಿ.ಇಟ್ನಾಳ್ ತಿಳಿಸಿದ್ದಾರೆ.

100ಕ್ಕಿಂತ ಹೆಚ್ಚು ಜನರು ಒಂದೇ ವೇದಿಕೆಯಲ್ಲಿ ನಿಂತು ಶಾಹಿ ಹಚ್ಚಿದ ತೋರು ಬೆರಳಿನೊಂದಿಗೆ ಸೆಲ್ಫಿ ತೆಗೆದು ಕಳುಹಿಸಿದಲ್ಲಿ ಇವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಕಳುಹಿಸಿದ ಸೆಲ್ಫಿಗಳಲ್ಲಿ ಆಕರ್ಷಕ ಫೋಟೋಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಅಲಂಕೃತ ಸಖಿ ಮತಗಟ್ಟೆ
ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ಸಖಿ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಇಲ್ಲಿ ಮಹಿಳಾ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆ ಇದಾಗಿದ್ದು ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಗುಲಾಬಿ ಬಣ್ಣದಿಂದ ಸಿಂಗಾರಗೊಂಡಿರುವ ಮತಗಟ್ಟೆಯಲ್ಲಿನ ಸಿಬ್ಬಂದಿ ಸಹ ಗುಲಾಬಿ ಬಣ್ಣದ ಧರಿಸು ಧರಿಸಿರುತ್ತಾರೆ.
ವಿಶೇಷ ಚೇತನರ ಮತಗಟ್ಟೆ ಸಿಬ್ಬಂದಿಗೆ ವಿಶೇಷ ಗೌರವ
ದಾವಣಗೆರೆ ಜಿಲ್ಲೆಯಲ್ಲಿ ತಲಾ 1 ಕ್ಷೇತ್ರದಲ್ಲಿ 1ರಂತೆ ವಿಶೇಷ ಚೇತನರ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಇಲ್ಲಿನ ಮತಗಟ್ಟೆ ಸಿಬ್ಬಂದಿ ಸಹ ವಿಶೇಷಚೇತನರಾಗಿರುತ್ತಾರೆ. ಇವರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಿದ್ದು, ಇನ್ನೋವಾ ವಾಹನ ನೀಡಲಾಗಿದೆ. ಮತ್ತು ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್‍ನಲ್ಲಿ ಇವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಇವರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ಜಿಲ್ಲಾಧಿಕಾರಿ ದಾವಣಗೆರೆ ಉತ್ತರ ಕ್ಷೇತ್ರದ ವಿಶೇಷಚೇತನರ ಮತಗಟ್ಟೆ ಸಿಬ್ಬಂದಿಗಳಿಗೆ ಹೂವಿನಹಾರ ಹಾಕುವ ಮೂಲಕ ಗೌರವಪೂರ್ವಕವಾಗಿ ಮತಗಟ್ಟೆಗೆ ಕಳುಹಿಸಿದ್ದಾರೆ.












Click it and Unblock the Notifications