ದಾವಣಗೆರೆ ದುರ್ಗಾಂಬ ದೇವಿ ದರ್ಶನ ಪಡೆದ ಅಮಿತ್ ಶಾ
ದಾವಣಗೆರೆ, ಏಪ್ರಿಲ್ 29: ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದ ಅದಿದೇವತೆ ದುರ್ಗಾಂಬ ದೇವಿಯ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಮೊದಲ ಬಾರಿಗ ರಾಷ್ಟ್ರೀಯ ನಾಯಕರೊಬ್ಬರು ದುರ್ಗಾಂಬೆಯ ದರ್ಶನ ಪಡೆಯಲು ಆಗಮಿಸಿದ್ದು.
ದುರ್ಗಾಂಬ ದೇವಿಯ ದರ್ಶನದ ನಂತರ ನಗರದ ಪ್ರಮುಖ ಬೀದಿಗಳಲ್ಲಿ 2 ಗಂಟೆಗಳ ಕಾಲ ಬೃಹತ್ ರೋಡ್ ಶೋ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ಭದ್ರ ಕೋಟೆಯಲ್ಲಿ ರಣಕಹಳೆ ಮೊಳಗಿಸಿದರು. ದಾವಣಗೆರೆ ನಗರದ ಹೊಂಡಾ ಸರ್ಕಲ್, ರಾಮ್ ಅಂಡ್ ಕೋ ವೃತ್ತ, ವಿನೋಬ ನಗರ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡಿಸಿದರು.

ಪಿ ಬಿ ರಸ್ತೆಯಲ್ಲಿರುವ ಶ್ರೀ ಶೈಲ ಮಠದ ಬಳಿ ರೋಡ್ ಶೋ ಅಂತ್ಯಗೊಳಿಸಿದ ಅಮಿತ್ ಶಾ ಜಿಎಂಐಟಿ ಗೆಸ್ಟ್ ಹೌಸ್ ಗೆ ಪ್ರಯಾಣ ಬೆಳಸಿದರು. ಗೆಸ್ಟ್ ಹೌಸ್ ನಲ್ಲಿ ಚಪಾತಿ ಊಟ ಸೇವಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಪ್ರವಾಸಕ್ಕೆ ಅಣಿಯಾದರು.
ಆದರೆ ಪೈಲೆಟ್‌ಗಳು ಇಲ್ಲದ ಕಾರಣ ಅಮಿತ್ ಶಾ ಕೆಲ ಕಾಲ ಕಾಯುವಂತಾಯಿತು. ನಂತರ ಗೆಸ್ಟ್ ಹೌಸ್ ನಲ್ಲಿ ಮಲಗಿದ್ದ ಪೈಲೆಟ್ ಗಳನ್ನು ಎಬ್ಬಿಸಿ ಕರೆದುಕೊಂಡು ಹೋಗಲಾಯಿತು.
ಅಮಿತ್ ಶಾ ಅವರು ಚಿತ್ರದುರ್ಗ, ತುಮಕೂರು ಜಿಲ್ಲೆ ಹಾಗೂ ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಇಂದು ರೋಡ್ ಶೋ ಮತ್ತು ಸಾರ್ವಜನಿಕ ಸಭೆ ಮಾಡಲಿದ್ದು, ಇಂದು ರಾತ್ರಿಯೇ ನವದೆಹಲಿಗೆ ವಾಪಾಸ್ ತೆರಳಲಿದ್ದಾರೆ.












Click it and Unblock the Notifications