Karnataka CET 2025: ಸಿಇಟಿ ಪರೀಕ್ಷೆಗೆ ದಾವಣಗೆರೆಯಲ್ಲಿ ಸಿದ್ಧತೆ ಹೇಗಿದೆ?
Karnataka CET 2025: ರಾಜ್ಯದಲ್ಲಿ ಸಿಇಟಿ 2025ರ ಪರೀಕ್ಷೆಯು ಏಪ್ರಿಲ್ 16 ಹಾಗೂ 17 ರಂದು ನಡೆಯಲಿದೆ. ಈ ಹಿನ್ನೆಲೆ ಆಯಾ ಜಿಲ್ಲೆಯ ಪರೀಕ್ಷೆ ಕೃಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾದರೆ ದಾವಣಗೆರೆಯಲ್ಲಿ ಎಷ್ಟು ಕೇಂದ್ರಗಳಿವೆ? ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಹಾಗೂ ಸೂಕ್ತ ಕ್ರಮಗಳ ಬಗ್ಗೆ ಇಲ್ಲಿ ತಿಳಿಯಿರಿ.
ದಾವಣಗೆರೆಯಲ್ಲಿ 28 ಕೇಂದ್ರಗಳಲ್ಲಿ 12,875 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನ ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಕೇಂದ್ರಗಳ ಪ್ರಾಂಶುಪಾಲರು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಇಟಿ ಪರೀಕ್ಷಾಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್ 16 ರಂದು ಬೆಳಗ್ಗೆ 10:30ರಿಂದ 11:50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದೆ.
ಏಪ್ರಿಲ್ 17ರಂದು ಬೆಳಗ್ಗೆ 10:30ರಿಂದ 11.50ರ ವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ 3:50ರ ವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಎಲ್ಲಾ ವಿಷಯಗಳು 60 ಅಂಕಗಳಿಗೆ ಸೀಮಿತ ಆಗಿರುತ್ತವೆ. ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿಯೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು. ಜೊತೆಗೆ ಗಾಳಿ, ಬೆಳಕು ಸರಿಯಾಗಿರಬೇಕು. ಕೆಲವು ಕಾಲೇಜುಗಳ ಶೌಚಾಲಯದ ಬಳಿಯಿರುವ ಕೊಠಡಿಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಿಇಟಿ-2025 ಬರೆಯುವ ಪುರುಷ, ಮಹಿಳೆಯರು ವಸ್ತ್ರಸಂಹಿತೆ ಪರಿಪಾಲನೆ ಮಾಡಬೇಕು. ಪುರುಷ ಅಭ್ಯರ್ಥಿಗಳಿಗೆ ಪರೀಕ್ಷಾ ದಿನದಂದು ಪೂರ್ಣತೋಳಿನ ಶರ್ಟ್‍ಗಳನ್ನು ಅನುಮತಿಸಲಾಗುವುದಿಲ್ಲ, ಅರ್ಧತೋಳಿನ ಶರ್ಟ್‍ಗಳನ್ನು ಧರಿಸಬೇಕು. ಸಾಧ್ಯ ಆದಷ್ಟು ಕಾಲರ್ ರಹಿತ ಸಾಧಾರಣ ಶರ್ಟ್, ಟೀ ಶರ್ಟ್ ಧರಿಸಬೇಕು. ಕುರ್ತಾ ಪೈಜಾನು, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ.
ಜೇಬುಗಳು ಇಲ್ಲದಿರುವ, ಕಮ್ಮಿ ಜೇಬಿಗಳಿರುವ ಪ್ಯಾಂಟ್ ಮತ್ತು ಸರಳ ಪ್ಯಾಂಟ್ ಧರಿಸಬೇಕು. ಬಟ್ಟೆಗಳು ಹಗುರ ಆಗಿರಬೇಕು. ಜಿಪ್ ಪಾಕೆಟ್‍ಗಳು, ಪಾಕೆಟ್‍ಗಳು, ದೊಡ್ಡ ಬಟನ್‍ಗಳು ಮತ್ತು ವಿಸ್ತಾರವಾದ ಕಸೂತಿ ಬಟ್ಟೆಗಳಿರಬಾರದು. ಪರೀಕ್ಷಾ ಕೊಠಡಿಯಲ್ಲಿ ಶೂಗಳನ್ನು ನಿಷೇಧಿಸಲಾಗಿದೆ. ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗದ ಚಪ್ಪಲಿಗಳನ್ನು ಧರಿಸಬೇಕು. ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣ ಧರಿಸುವುದು ಅಥವಾ ಕಿವಿಯೋಲೆ, ಉಂಗುರುಗಳು, ಕಡಗಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳಿಗೆ ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳು ಹೊಂದಿರುವ ಬಟ್ಟೆಗಳ ಧರಿಸುವುದು ನಿಷಿದ್ದ, ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರ ಆಗದಂತೆ ಮತ್ತು ವಸ್ತ್ರ ಸಂಹಿತೆಯಂತೆ ಬಟ್ಟೆ ಧರಿಸಬೇಕು. ಹೀಲ್ಡ್ ಚಪ್ಪಲಿ, ಶೂಗಳನ್ನು ಧರಿಸಬಾರದು. ತೆಳುವಾದ ಅಡಿಭಾಗ ಇರುವ ಚಪ್ಪಲಿ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ವಸ್ತುಗಳ ನಿಷೇಧ ಡ್ರೆಸ್‌ಕೋಡ್ ಜೊತೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್, ಕೈ ಗಡಿಯಾರಗಳನ್ನು ಕೊಠಡಿಗೆ ತರುವಂತಿಲ್ಲ. ಯಾವುದೇ ತಿನಿಸು ವಸ್ತುಗಳನ್ನು ತರುವಂತಿಲ್ಲ, ಬಣ್ಣದ ಹಾಗೂ ಲೋಹದ ಕುಡಿಯುವ ನೀರಿನ ಬಾಟಲಿಗೂ ಅನುಮತಿಯಿಲ್ಲ, ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ ಧರಿಸುವಂತಿಲ್ಲ ಹಾಗೂ ಮುಖಮುಚ್ಚುವಂತ ಮಾಸ್ಕ್ ಧರಿಸುವಂತಿಲ್ಲ.
ಯಾವ ವಸ್ತುಗಳಿಗೆ ಅನುಮತಿ?: ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳು ಕೇಂದ್ರದೊಳಗೆ ಕನಿಷ್ಠ ಮೊದಲ ಬೆಲ್ ಆಗುವ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಕೇಂದ್ರದಲ್ಲಿ ಕೊಠಡಿ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ಮುಖವನ್ನಾಧರಿಸಿ ಆಫ್ ಮೂಲಕ ಗುರುತು ಪತ್ತೆ ಮಾಡುವ ಕಾರ್ಯ ನಡೆಯಲಿದೆ. ಮತ್ತು ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ತಪಾಸಣೆ ನಡೆಯುವುದರಿಂದ ಮೊದಲ ಬೆಲೆ ಆಗುವ ಮುನ್ನ 2 ಗಂಟೆಗಳ ಕಾಲ ಮುಂಚಿತವಾಗಿ ಕೇಂದ್ರದಲ್ಲಿರಬೇಕು.












Click it and Unblock the Notifications