ಬಂಕರ್ ಒಳಗೆ ಕುಳಿತಿದ್ದ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿ ಆದರ್ಶ್
ದಾವಣಗೆರೆ, ಮಾರ್ಚ್ 09: "ಉಕ್ರೇನ್‌ನಲ್ಲಿ ಯುದ್ಧ ಶುರುವಾಗಿದಾಗಿನಿಂದಲೂ ಆತಂಕ, ಭಯ ಕಾಡುತಿತ್ತು. ಅಲ್ಲಿನ ವಾತಾವರಣ ನೆನಪಿಸಿಕೊಂಡರೆ ಈಗಲೂ ಎದೆ ಝಲ್ ಎನ್ನುತ್ತದೆ. ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದ್ದವು. ನಾವು ಒಂದು ಬಂಕರ್ ಒಳಗೆ ಸುಮಾರು ಎಂಟರಿಂದ ಹತ್ತು ದಿನಗಳ ಕಾಲ ಉಳಿದುಕೊಂಡು ನಮ್ಮ ತಾಯ್ನಾಡಿಗೆ ಮರಳುವಂತೆ ಸ್ಥಿತಿ ನನಗೆ ಎದುರಾಯಿತು. ನಮ್ಮ ದೇಶದ ತ್ರಿವರ್ಣ ಧ್ವಜವನ್ನು ತೋರಿಸುವ ಮೂಲಕ ಗಡಿ ಭಾಗಕ್ಕೆ ಬರಲು ಕಾರಣವಾಯಿತು'' ಎಂದು ವಿದ್ಯಾರ್ಥಿ ಆದರ್ಶ್ ಹೇಳಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಆದರ್ಶ್, ಉಕ್ರೇನ್‌ನಲ್ಲಿನ ಭಯಾನಕತೆಯನ್ನು ಹಂಚಿಕೊಂಡಿದ್ದಾರೆ. "ಜಗಳೂರಿನ ಶಾಸಕ ಎಸ್. ವಿ ರಾಮಚಂದ್ರಪ್ಪ ನಿರಂತರ ಸಂಪರ್ಕದಲ್ಲಿದ್ದರು. ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರದ ನೆರವಿನಿಂದ ಸುರಕ್ಷಿತವಾಗಿ ಬರಲು ಸಾಧ್ಯವಾಯಿತು. ಎಲ್ಲರಿಗೂ ನಾನು ಚಿರ ಋಣಿಯಾಗಿರುತ್ತೇನೆ" ಎಂದರು.
"ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನನ್ನನ್ನು ಶಾಸಕ ಎಸ್. ವಿ. ರಾಮಚಂದ್ರಪ್ಪ ಆತ್ಮೀಯವಾಗಿ ಬರಮಾಡಿಕೊಂಡರು. ಬೆಂಗಳೂರಿನ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿ ನನಗೆ ವಿಶ್ರಾಂತಿ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟರು. ನನ್ನ ಹುಟ್ಟೂರಾದ ಸೊಕ್ಕೆಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರಿಗೆ ಮತ್ತು ಎಲ್ಲಾ ನನ್ನ ಪಟ್ಟಣದ ಸೋದರ ಮತ್ತು ಸೋದರಿಯರಿಗೆ ತುಂಬು ಹೃದಯದ ಹೃತ್ಪೂರ್ವಕವಾದ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.

ಬುಧವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆದರ್ಶ್ ಉಕ್ರೇನ್ ದೇಶದ ಖಾರ್ಕೀವ್ ನಗರದಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಜಗಳೂರು ತಾಲ್ಲೂಕಿನ ಸ್ವಚ್ಛ ಗ್ರಾಮದ ಸುಶೀಲಮ್ಮ ಮತ್ತು ಶಿವಮೂರ್ತಿ ಎಂಬುವರ ಪುತ್ರ. ಉಕ್ರೇನ್‌ನಿಂದ ಸುಕ್ಷಿತವಾಗಿ ವಾಪಸ್ ಆದ ಪುತ್ರನಿಗೆ ಸಿಹಿ ತಿನ್ನಿಸಿ ಪೋಷಕರು ಬರಮಾಡಿಕೊಂಡರು.
ಶಾಸಕ ಎಸ್. ವಿ. ರಾಮಚಂದ್ರಪ್ಪ ಮಾತನಾಡಿ, "ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಹಲವು ಸಮಸ್ಯೆಗಳನ್ನು ಅನುಭವಿಸಿ ಕೊನೆಗೂ ಸುರಕ್ಷಿತವಾಗಿ ಎಸ್. ಆದರ್ಶ್ ಭಾರತಕ್ಕೆ ಮರಳಿದ್ದಾರೆ. ವಿಮಾನ ನಿಲ್ದಾಣದಿಂದ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡಲಾಗಿತ್ತು. ನನ್ನ ವಾಹನದಲ್ಲಿ ಸೊಕ್ಕೆ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದೇನೆ" ಎಂದರು.
ಜಗಳೂರು ಪಟ್ಟಣಕ್ಕೆ ಆಗಮನ; ಜಗಳೂರು ಪಟ್ಟಣಕ್ಕೆ ಆದರ್ಶ್ ಆಗಮಿಸುತ್ತಿದ್ದಂತೆ ಪಟ್ಟಣದ ಜನತೆ ಹಾಗೂ ಬಿಜೆಪಿ ಪಕ್ಷದ ಮುಖಂಡರು ಶಾಲು ಹೊದಿಸಿ, ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು.
ಆದರ್ಶ್ ಪೋಷಕರು ಮಾತನಾಡಿ, "ನನ್ನ ಮಗನನ್ನು ಯುದ್ಧಪೀಡಿತ ಉಕ್ರೇನ್ ದೇಶದಿಂದ ಸುರಕ್ಷಿತವಾಗಿ ಕರೆತರಲು ಶ್ರಮಿಸಿದ ಜಗಳೂರಿನ ಶಾಸಕ ಎಸ್. ವಿ. ರಾಮಚಂದ್ರಪ್ಪ ಹಾಗೂ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಾವಣಗೆರೆ ಸಂಸದ ಸಿದ್ದೇಶ್ವರ್ ಮತ್ತು ಎಲ್ಲಾ ಅಧಿಕಾರಿ ವರ್ಗದವರಿಗೆ ನಮ್ಮ ಕುಟುಂಬದಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ" ಎಂದರು.












Click it and Unblock the Notifications