ನಾನು ಯಾವುದೇ ತಪ್ಪು ಮಾಡಿಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಲು ಕಾರಣ ಏನು?
ದಾವಣಗೆರೆ, ಮಾರ್ಚ್, 21: ಯಾವ ದೇವಸ್ಥಾನಕ್ಕಾದರೂ ಬರಲಿ, ಮಠಗಳಿಗಾದರೂ ಬರಲಿ. ಆಣೆ ಮಾಡಲು ಸಿದ್ಧನಿದ್ದೇನೆ. ಬೇರೆಯೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ಹಾಗಾದರೆವ ಹೀಗೇ ಹೇಳಿದ್ದು ಯಾರ ಪ್ರತಿಕ್ರಿಯೆಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು. ದಾವಣಗೆರೆಯಲ್ಲಿಯೂ ಬಿಜೆಪಿ ಗೆಲ್ಲಿಸಬೇಕೆಂಬ ಅಪೇಕ್ಷೆ ನಮ್ಮದು ಎಂದು ಹೇಳಿದರು.

ಹಣಕ್ಕೋಸ್ಕರ ರೇಣುಕಾಚಾರ್ಯ ಸೇರಿದಂತೆ ಇತರರು ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಬಿಜೆಪಿ ಪಕ್ಷವು ನಮಗೆ ತಾಯಿ ಸಮಾನ. ವದಂತಿಗಳು ಹಾಗೂ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ದೇವರು ನಮಗೆ ಆರ್ಥಿಕವಾಗಿ ಶಕ್ತಿ ನೀಡಿದ್ದು, ಇಂತಹ ಆಸೆ ನಮ್ಮಲ್ಲಿರುವ ಯಾರಿಗೂ ಇಲ್ಲ. ದುಡ್ಡಿಗಾಗಿ ಇಂತಹ ಕೆಲಸಕ್ಕೂ ನಾವು ಕೈ ಹಾಕುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ನಮಗೂ ಆಸ್ತಿ ಇದೆ. ಆಸ್ಪತ್ರೆ, ವ್ಯಾಪಾರ ವಹಿವಾಟು ಸೇರಿದಂತೆ ಇತರೆ ರೀತಿಯಲ್ಲಿ ಶಕ್ತಿಯುತವಾಗಿದ್ದೇವೆ. ಕೆಲವರು ವಿನಾಕಾರಣ ಹಣ ಪಡೆದು ಅಥವಾ ಬೇರೆ ಯಾರಿಗೋ ಸಹಾಯ ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿಸುತ್ತಿರುವುದು ಸರಿಯಲ್ಲ ಎಂದರು.
ಈಶ್ವರಪ್ಪರ ಪರ ಬ್ಯಾಟಿಂಗ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಬೇಕಿತ್ತು. ಯಾಕೆ ನಿರಾಕರಿಸಲಾಯಿತು ಎಂಬುದು ಗೊತ್ತಿಲ್ಲ. ಪಕ್ಷದ ವರಿಷ್ಠರು ಈ ಕ್ರಮ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.
ಆದ್ರೆ, ಈ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಆರೋಪ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಾನು ದೊಡ್ಡವನಲ್ಲ. ಈಶ್ವರಪ್ಪರ ಕುಟುಂಬಕ್ಕೆ ಟಿಕೆಟ್ ನೀಡಿದ್ದರೆ ತಪ್ಪೇನಾಗುತಿತ್ತು ಎಂಬುದಷ್ಟೇ ನನ್ನ ಭಾವನೆ ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು.
ನಾನು ಸ್ವಾರ್ಥಿ ಅಲ್ಲ. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವವನು. ಈಗ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಒಬ್ಬನ ಅಭಿಪ್ರಾಯ, ನಿರ್ಧಾರ ಸಾಧ್ಯವಿಲ್ಲ. ಎಲ್ಲರೊಟ್ಟಿಗೆ ಚರ್ಚಿಸಿದ ಬಳಿಕವಷ್ಟೇ ನಿರ್ಧಾರ ಘೋಷಿಸುತ್ತೇವೆ. ಸಮಯ ಇರುವುದರಿಂದ ಕಾಯಿರಿ ಎಂದು ಹೇಳಿದರು.
ಒಟ್ಟಾರೆ ರೇಣುಕಾಚಾರ್ಯರ ನಿಗೂಢ ನಡೆ ಬಿಜೆಪಿಗರಿಗಂತೂ ತಲೆನೋವು ತಂದಿಟ್ಟುರುವುದು ನಿಜ. ಒಂದೆಡೆ ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಯುತ್ತಿವೆಯಾದರೂ, ರೇಣುಕಾಚಾರ್ಯ ಅವರು ಮಾತ್ರ ಯಾವುದಕ್ಕೂ ಬಗ್ಗುತ್ತಿಲ್ಲ. ನಾವೆಲ್ಲರೂ ಸಭೆ ನಡೆಸಿ ಚರ್ಚಿಸಿ ನಿರ್ಧರಿಸುತ್ತೇವೆ ಎನ್ನುವ ಮೂಲಕ ನಿಗೂಢ ನಡೆ ಇಟ್ಟಿದ್ದಾರೆ. ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬ ಕುತೂಹಲವೂ ಕೆರಳಿಸಿದೆ.
ನಿಲುವಿನಲ್ಲಿ ಬದಲಾವಣೆ ಇಲ್ಲ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ವಿಚಾರದಲ್ಲಿನ ಗೊಂದಲದ ವಿಚಾರ ಕುರಿತಂತೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನನ್ನ ಮನೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಬಂದಿದ್ದರು. ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಎಲ್ಲಾ ಮುಖಂಡರ ಜೊತೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.
ಗಾಯತ್ರಿ ಸಿದ್ದೇಶ್ವರ ಅವರು ಮನೆಗೆ ಬಂದಿದ್ದರು. ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದರು. ಫೋನ್ ಮಾಡಿಯೂ ಅವರ ಪುತ್ರ ಬೆಂಬಲಿಸುವಂತೆ ಕೋರಿದರು. ಆದ್ರೆ, ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗದು. ಈ ಕಾರಣಕ್ಕೆ ಎಲ್ಲರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ ಎಂದರು.
ಗಾಯತ್ರಿ ಸಿದ್ದೇಶ್ವರ ಅವರ ಬಗ್ಗೆ ಅಪಾರ ಗೌರವ ಇದೆ. ಈ ಹಿಂದೆ ಉತ್ತಮ ಬಾಂಧವ್ಯವೂ ಇತ್ತು. ಆದ್ರೆ, ಕೆಲ ಸಮಸ್ಯೆಗಳಿಂದ ಈ ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಸರಿ ಹೋಗಬಹುದು. ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಜೊತೆಗಿರುವವರ ಜೊತೆ ಚರ್ಚಿಸಿದ ಬಳಿಕ ನಿರ್ಧಾರಕ್ಕೆ ಬರುವುದಾಗಿ ಹೇಳಿದರು.
ಮಾಧ್ಯಮಗಳ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ? ಎಲ್ಲಿ ಸಭೆ ನಡೆಸುತ್ತೇವೆ ಎಂದು ಹೇಳಲು ಆಗದು. ಅಜ್ಞಾತ ಸ್ಥಳದಲ್ಲಿ ಸಭೆ ನಡೆಸುತ್ತೇವೆ. ಎಸ್.ಎ.ರವೀಂದ್ರನಾಥ್ ಅವರು 1990ರಿಂದಲೂ ಪಕ್ಷ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ನಮ್ಮ ಗುಂಪಿನ ಎಲ್ಲರ ಜೊತೆ ಸಮಾಲೋಚನೆ ನಡೆಸಿ, ಚರ್ಚಿಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನು ಸಾಕಷ್ಟು ಸಮಯ ಇದೆ. ಈಗಲೇ ಹೇಳಲು ಆಗದು ಎಂದು ಪ್ರಶ್ನೆಯೊಂದಕ್ಕೆ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡಲ್ಲ. ನಾವೇನೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಆರೋಪ ಮಾಡಿಲ್ಲ, ಟೀಕೆ ಮಾಡಿಲ್ಲ. ತಪ್ಪೇನೂ ಮಾಡಿಲ್ಲ. ತಪ್ಪು ಮಾಡುವವರ ವಿರುದ್ಧ ಉಚ್ಚಾಟನೆಯಂಥ ಬಿಗಿ ಕ್ರಮ ತೆಗೆದುಕೊಳ್ಳಲಿ. ಆದ್ರೆ, ನಾವು ಯಾವುದೇ ರೀತಿಯ ಪಕ್ಷಕ್ಕೆ ದ್ರೋಹ ಬಗೆಯುವಂಥ ಕೆಲಸ ಮಾಡಿಲ್ಲ. ಹಾಗಾಗಿ, ನಮ್ಮನ್ನು ಯಾಕೆ ಉಚ್ಚಾಟಿಸಲಾಗುತ್ತದೆ ಎಂದು ಮಾಧ್ಯಮವದರನ್ನೇ ಪ್ರಶ್ನಿಸಿದರು.
ಸರ್ವೆ ನಡೆಸಿ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ್ದರು. ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಸರ್ವೇ ಬಂದಿಲ್ಲ. ಆದರೂ ಟಿಕೆಟ್ ನೀಡಲಾಗಿದೆ. ಹಾಗಾಗಿ, ನಾವೆಲ್ಲರೂ ಹೇಳಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರು ಹಾಗೂ ಜನರ ಅಭಿಪ್ರಾಯ. ಅದೂ ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ನಡೆಸುವುದೂ ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಷಡ್ಯಂತ್ರ ಎಂದಿದ್ಯಾಕೆ ಎಂ.ಪಿ.ರೇಣುಕಾಚಾರ್ಯ?: ಕೆಲ ಮಾಧ್ಯಮಗಳಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಎಚ್ಚರಿಕೆ ನೀಡಿದ್ದಾರೆ. ಇದೇ ಧೋರಣೆ ಮುಂದುರೆಸಿದರೆ ನಿನ್ನ ದಾರಿ ನೋಡಿಕೋ, ಪಕ್ಷ ಬಿಟ್ಟು ಹೋಗು ಎಂದು ಹೇಳಿಲ್ಲ. ಆದ್ರೆ, ಕೆಲ ಮಾಧ್ಯಮಗಳಲ್ಲಿ ವರದಿ ಬಂದಿದೆ. ಇದು ಸತ್ಯಕ್ಕೆ ದೂರ. ಇದರ ಹಿಂದೆ ಷಡ್ಯಂತ್ರ ಅಡಗಿದೆ. ನನಗೆ ಯಾವುದೇ ಸೂಚನೆ, ಎಚ್ಚರಿಕೆ ಬಂದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಕುರಿತಂತೆ ನಮ್ಮ ಅಭಿಪ್ರಾಯಗಳನ್ನು ವರಿಷ್ಠರಿಗೆ ಈಗಲೂ ಹಾಗೂ ಈ ಹಿಂದೆಯೇ ತಿಳಿಸಿದ್ದೇವೆ. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಲ್ಲ. ಆದ್ರೆ, ಮಾಧ್ಯಮಗಳಲ್ಲಿ ಈ ರೀತಿ ಬಂದಿದೆ. ಈ ರೀತಿಯಾದ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ನಮ್ಮ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಮಾಧ್ಯಮಗಳಲ್ಲಿ ಭಿನ್ನಮತೀಯ, ರೆಬೆಲ್, ಬಂಡಾಯಗಾರ ಎಂದೆಲ್ಲಾ ಬಿರುದು ನೀಡಿದ್ದಾರೆ. ಆದ್ರೆ. ನನಗೇನೂ ಬೇಸರ ಇಲ್ಲ. ನಾವೇನೂ ಬಂಡಾಯ ಎದ್ದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದರು.
ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜನರ ಅಭಿಪ್ರಾಯ ತಿಳಿಸಿದ್ದೇವೆ. ನಾವು ಈಗಲೂ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಬೇಕು ಎಂಬ ನಿಲುವು ಹೊಂದಿದ್ದೇವೆ. ಇದಕ್ಕಾಗಿ ಹೋರಾಟ ಮಾಡುತ್ತೇವೆ ಎಂದಿದ್ದೇವೆ. ಆದ್ರೆ, ನಮ್ಮ ಭಾವನೆಗಳನ್ನು ಹೇಳಿಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪಿಎಂ ಆಗಲು ಎಲ್ಲಾ ರೀತಿಯ ಶ್ರಮ ಹಾಕುತ್ತೇವೆ. ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ತಪ್ಪೇನೂ ಮಾಡಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.












Click it and Unblock the Notifications